ಬೆಳ್ಮಣ್: ನೆಹರು ಯುವ ಕೇಂದ್ರ ಉಡುಪಿ, ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ನ ಸಹಯೋಗದಲ್ಲಿ 22ನೇ ವರ್ಷದ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಹುತಾತ್ಮ ಯೋಧರ ಸ್ಮರಣಾರ್ಥ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಬಳಿ ಸೋಮವಾರ ಗಿಡನೆಟ್ಟು ಸೈನಿಕರಿಗೆ ಗೌರವ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನ ಸಂಚಾಲಕ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಮ್ಮ ದೇಶದ ಧ್ವಜ ಹಾರುತ್ತಿರುವುದು ಗಾಳಿಯಿಂದಲ್ಲ, ಸೈನಿಕರ ಉಸಿರಿನಿಂದ. ಪ್ರತಿಯೊಬ್ಬ ಸೈನಿಕರ ಸೇವೆ ಅದ್ಬುತ ಎಂದು ಹೇಳಿದರು.
ಬೋಳ ಗ್ರಾಮ ಪಂಚಾಯತ್ ಸದಸ್ಯ ರಘುವೀರ್ ಶೆಟ್ಟಿ ಗಿಡ ನೆಟ್ಟು ಮಾತನಾಡುತ್ತಾ, ಪ್ರತಿಯೊಂದು ಕೆಲಸ ಕಾರ್ಯ, ಸಾಧನೆ, ಗೆಲುವಿನ ಹಿಂದೆ ಬಹಳಷ್ಟು ಜನರ ಬಲಿದಾನವಿದೆ. 1999ರಲ್ಲಿ ಪಾಕ್ ಭಾರತೀಯ ಗಡಿ ಆಕ್ರಮಿಸಿದ್ದರ ವಿರುದ್ಧ ನಡೆದ ಯುದ್ಧದಲ್ಲಿ 527 ಸೈನಿಕರು ವೀರ ಮರಣವನ್ನಪ್ಪಿದರು. 1350ಕ್ಕೂ ಅಧಿಕ ವೀರ ಯೋಧರು ಗಾಯಾಳುಗಳಾಗಿದ್ದರು. ಇಂದು ಕಾರ್ಗಿಲ್ ವಿಜಯೋತ್ಸವವಾಗಿ ಇಪ್ಪತ್ತೆರಡು ವರ್ಷಗಳೇ ಸಂದಿದೆ. ಕಾರ್ಗಿಲ್ ವಿಜಯ ಹಾಗೂ ಸೈನಿಕರ ಕೆಚ್ಚೆದೆಯ ಹೋರಾಟದ ನೆನಪಿಗಾಗಿ ಗಿಡ ನೆಟ್ಟು ಸೈನಿಕರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದರು. ಕಾರ್ಗಿಲ್ ಯುದ್ಧದಲ್ಲಿ ಸೆಣಸಾಡಿ ಹುತಾತ್ಮರಾದ ವೀರ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ನಂದಳಿಕೆ ಗ್ರಾಮ ಪಂಚಾಯತ್ ಸದಸ್ಯೆ ಅಬ್ಬನಡ್ಕ ಪದ್ಮಶ್ರೀ ಪೂಜಾರಿ, ಸಂಸ್ಥೆಯ ನಿಕಟಪೂರ್ವಾಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಪೂರ್ವಾಧ್ಯಕ್ಷ ಆನಂದ ಪೂಜಾರಿ, ಬೀರೋಟ್ಟು ದಿನೇಶ್ ಪೂಜಾರಿ, ಕಾಸ್ರಬೈಲು ಸುರೇಶ ಪೂಜಾರಿ, ಕಾರ್ಯದರ್ಶಿ ಅಬ್ಬನಡ್ಕ ಹರಿಪ್ರಸಾದ ಆಚಾರ್ಯ, ಉಪಾಧ್ಯಕ್ಷ ಪ್ರಶಾಂತ್ ಪೂಜಾರಿ, ಕೋಶಾಧಿಕಾರಿ ವೀಣಾ ಪೂಜಾರಿ, ಜೊತೆ ಕಾರ್ಯದರ್ಶಿ ಹರಿಣಾಕ್ಷಿ ಪೂಜಾರಿ, ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನ ಕೋಟ್ಯಾನ್, ಸದಸ್ಯರಾದ ಬಾಲಕೃಷ್ಣ ಮಡಿವಾಳ, ಹರೀಶ್ ಪೂಜಾರಿ, ಅಬ್ಬನಡ್ಕ ಸುರೇಶ್ ಪೂಜಾರಿ, ಲಲಿತಾ ಆಚಾರ್ಯ, ಸಂಧ್ಯಾ ಶೆಟ್ಟಿ, ಲೀಲಾ ಪೂಜಾರಿ ಮೊದಲಾದವರಿದ್ದರು.