ಅಡುಗೆ ಅನಿಲವೂ ಸೇರಿ ಅಗತ್ಯ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಲ್ಲಿ ಸರಕಾರದ ಪಾತ್ರವಿಲ್ಲ ಎಂದು ಹೇಳುತ್ತಲೆ ಪ್ರಧಾನಿ ನರೇಂದ್ರ ಮೋದಿ ಸರಕಾರ ಗ್ಯಾಸ್ ಸಿಲಿಂಡರ್ ಬೆಲೆ ಏರಿಸಿ, ಸಬ್ಸಿಡಿ ರದ್ದುಗೊಳಿಸಿ, ಉಜ್ವಲ ಯೋಜನೆಯ ಫಲಾನುಭವಿಗಳೂ ಸೇರಿ ದೇಶದ 12 ಕೋಟಿ ಬಿಪಿಎಲ್ ಕುಟುಂಬಗಳ ಮನೆಯ ಒಲೆ ಆರಿಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ. ದೇಶದಲ್ಲಿ ಸರಕಾರ ಇದೆಯೇ ಎಂಬ ಸಂಶಯ ಜನರನ್ನು ಕಾಡಲಾರಂಬಿಸಿದೆ. ಕಳೆದ 6 ತಿಂಗಳಲ್ಲಿ 6 ಬಾರಿ ಏರಿಕೆ ಕಂಡ ಗೃಹ ಬಳಕೆಯ ಸಿಲಿಂಡರ್ ಬೆಲೆ ಇದೀಗ 8ಶೇ. ಜಿಎಸ್ಟಿ ಹೇರಿಕೆಯೊಂದಿಗೆ 25.50ರೂ ಏರಿಕೆಯಾಗಿ 834- 837 ರೂ ಆಸುಪಾಸಿನಲ್ಲಿದ್ದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 18 ಶೇ. ಜಿಎಸ್ಟಿಯೊಂದಿಗೆ 76 ರೂ. ಏರಿಕೆಯಾಗಿ 1617 ರೂ. ಚಾರಿತ್ರಿಕ ದಾಖಲೆ ಸಾದಿಸಿದೆ.
ಈಗಾಗಲೇ ಕೊರೋನಾ ಸಂಕಷ್ಟದಲ್ಲಿ ಬಾಗಿಲು ಎಳೆದು ವ್ಯಾಪಾರವಿಲ್ಲದೆ ಸಾಲದ ಸುಳಿಯಲ್ಲಿ ಸಿಲುಕಿ ಸೋತು ಸುಣ್ಣವಾಗಿರುವ ಹೊಟೇಲು ಮಾಲಿಕರು, ಕ್ಯಾಂಟೀನ್ ಕಂಟ್ರಾಕ್ಟರರು, ಬೀದಿಬದಿಯ ಊಟ ತಿಂಡಿ ಚಾಟ್ ಅಂಗಡಿ ವ್ಯಾಪಾರಿಗಳ ಬದುಕಿಗೆ ಕಮರ್ಶಿಯಲ್ ಸಿಲಿಂಡರ್ ಬೆಲೆ ಏರಿಕೆ, ಅವರ ಬದುಕಿಗೆ ಬರೆಯ ಮೇಲೆ ಬರೆ ಎಳೆದಂತಾಗಿದೆ. ಆಳುವ ಸರಕಾರಕ್ಕೆ ಜನಪರ ಚಿಂತನೆ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಯುಪಿಎ ಆಡಳಿತಾವಧಿಯಲ್ಲಿ ನೇರ ಸಬ್ಸಿಡಿಯೊಂದಿಗೆ ಸಿಲಿಂಡರ್ ಬೆಲೆ ರೂ. 423- 430ಕ್ಕೆ ಏರಿಕೆ ಕಂಡಾಗ ಬೀದಿಯಲ್ಲಿ ಅರಚಾಟ ನಡೆಸಿದ ಬಿಜೆಪಿ ನಾಯಕರು ಈಗ ಮೌನಕ್ಕೆ ಶರಣಾಗಿರುವುದು ಆ ಪಕ್ಷದ ಸಾಮಾಜಿಕ ಕಳಕಳಿಯ ನಿರಾಸಕ್ತಿಗೆ ಸಾಕ್ಷಿಯಾಗಿದೆ. ಅಂದು ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಶೋಭಾ ಕರಂದ್ಲಾಜೆ ಇಂದು ಅದೇ ಸರಕಾರದಲ್ಲಿ ಮಂತ್ರಿಯಾಗಿದ್ದಾರೆ. ಸರಕಾರದ ಮೇಲೆ ಒತ್ತಡ ಹೇರಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಿ, ಸಬ್ಸಿಡಿ ಕೊಡಿಸಿ, ಅಂದಿನ ಹೋರಾಟದ ಯತಾರ್ಥತೆಯನ್ನು ಇಂದಾದರೂ ಸಾಬೀತು ಪಡಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.