ಕೃಷಿ ಕಾರ್ಮಿಕರ ಸಮಸ್ಯೆಗಳು ಸೇರಿದಂತೆ ಹಲವಾರು ಸಮಸ್ಯೆಗಳಿಂದ ಫಲವತ್ತತೆಯ ಕೃಷಿ ಭೂಮಿಗಳಲ್ಲಿ ಕೃಷಿ ಕಾರ್ಯಗಳಾಗದೆ ಹಡಿಲು ಬಿದ್ದಿವೆ. ಇಂತಹ ಜಾಗಗಳನ್ನು ಗುರುತಿಸಿ ಹಡಿಲು ಭೂಮಿ ಕೃಷಿ ಆಂದೋಲನಕ್ಕೆ ಹೊಸ ದಿಕ್ಕನ್ನು ಶಾಸಕ ರಘುಪತಿ ಭಟ್ ನೇತೃತ್ವದ ಕೇದಾರೋತ್ಥಾನ ಟ್ರಸ್ಟ್ ನೀಡಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಚೇರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 25 ಎಕರೆ ಹಡಿಲು ಭೂಮಿಯನ್ನು ಸಾವಯವ ಕೃಷಿ ಮಾಡಲಾಗುತ್ತಿದ್ದು, ಶನಿವಾರ ಚೇರ್ಕಾಡಿ ಗ್ರಾಮದ ಸೂರೆಬೆಟ್ಟು ಬಳಿಯ ಹಡಿಲು ಭೂಮಿ ಕೃಷಿಗೆ ಅವರು ಚಾಲನೆ ನೀಡಿ ಮಾತನಾಡಿದರು.
ಕೇದಾರೋತ್ಥಾನ ಟ್ರಸ್ಟ್ ಮೂಲಕ ಕೃಷಿ ಮಾಡಲು ಯಂತ್ರೋಪಕರಣಗಳು ಸೇರಿದಂತೆ ಆರ್ಥಿಕ ಸಹಾಯ ನೀಡಿ ಪ್ರೋತ್ಸಾಹಿಸುವ ಜೊತೆಯಲ್ಲಿ ಟ್ರಸ್ಟ್ ಮೂಲಕವೇ ಸಾವಿರಾರು ಎಕರೆ ಹಡಿಲು ಭೂಮಿಯನ್ನು ಅದರಲ್ಲೂ ಸಾವಯವ ಕೃಷಿ ಮಾಡುತ್ತಿರುವುದು ಶ್ಲಾಘನೀಯ. ಇದರಿಂದ ಭತ್ತದ ಉತ್ಪಾದನೆ ಹೆಚ್ಚಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವು ಕೂಡ ಕುಸಿಯುವುದನ್ನು ತಡೆಯಬಹುದು. ಕೃಷಿಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಹೋಗಲಾಡಿಸಲು ಈ ಯೋಜನೆ ಮುನ್ನುಡಿ ಬರೆಯಲಿ ಎಂದರು.
ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ಭಟ್, ಉಪಾಧ್ಯಕ್ಷ ಕಿಟ್ಟಪ್ಪ ಅಮೀನ್, ಸದಸ್ಯ ಕಮಲಾಕ್ಷ್ ಹೆಬ್ಬಾರ್, ಚೇರ್ಕಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ, ಹಿರಿಯ ಕೃಷಿಕ ಶಿವರಾಮ್ ಶೆಟ್ಟಿ, ಅರ್ಚಕರಾದ ಜಯರಾಮ್ ಸೂರ್ಯ, ರಾಜ್ಯ ಎಸ್.ಟಿ ಮೋರ್ಚಾದ ಕಾರ್ಯದರ್ಶಿಗಳಾದ ಉಮೇಶ್ ನಾಯ್ಕ್, ಧನಂಜಯ್ ಅಮೀನ್, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಸದಸ್ಯರಾದ ಪ್ರತಾಪ್ ಹೆಗ್ಡೆ ಮಾರಾಳಿ, ಬಿರ್ತಿ ರಾಜೇಶ್ ಶೆಟ್ಟಿ, ಉಡುಪಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಾದ ಮೋಹನ್ ರಾಜ್, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಶಂಕರ್, ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮುಂತಾದವರು ಉಪಸ್ಥಿತರಿದ್ದರು.