ಕೊರೊನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ 23 ಸಾವಿರ ಕೋಟಿ ರೂಪಾಯಿಗಳ ಪ್ಯಾಕೇಜ್ ನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಈ ಪ್ಯಾಕೆಜ್ ಅಡಿಯಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಐಸಿಯು ಹಾಸಿಗೆ, ಮಕ್ಕಳ ಆರೈಕೆ ಘಟಕಗಳು, ಆಮ್ಲಜನಕ ಸಂಗ್ರಹಣೆ, ಆಂಬ್ಯುಲೆನ್ಸ್, ಔಷಧಿಗಳಂತಹ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು.
ಗುರುವಾರ ಸಚಿವ ಸಂಪುಟ ಪುನಾರಚನೆಯ ನಂತರ ಗುರುವಾರ ನಡೆದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ 2021-22ರ ಆರ್ಥಿಕ ವರ್ಷಕ್ಕೆ 23,123 ಕೋಟಿ ರೂ.ಗಳ ಮೊತ್ತದ ಕೋವಿಡ್ -19 ತುರ್ತು ಕ್ರಮಕ್ಕಾಗಿ ಆರೋಗ್ಯ ವ್ಯವಸ್ಥೆಯ ಸಿದ್ಧತೆಗೆ ಎರಡನೆಯ ಹಂತದ ಪ್ಯಾಕೆಜ್ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕ್ಯಾಬಿನೆಟ್ ಸಭೆಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ಮಂಡಿಗಳನ್ನು ಸಬಲೀಕರಣಗೊಳಿಸುವ ಸಲುವಾಗಿ ಕೃಷಿ ಮೂಲಸೌಕರ್ಯ ನಿಧಿಯ ಬಳಕೆಗೆ ಸಹ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಧಾನಿ ಹೇಳಿದರು.
ಕ್ಯಾಬಿನೆಟ್ ಸಭೆಯ ನಂತರ ಸುದ್ಧಿಗಾರರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, 23 ಸಾವಿರ ಕೋಟಿ ರೂಪಾಯಿಗಳ ಯೋಜನೆಯು ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ, ಆರಂಭಿಕ ಹಂತದಲ್ಲೇ ಸೋಂಕು ತಡೆಗಟ್ಟುವಿಕೆ, ಪತ್ತೆ ಮತ್ತು ನಿರ್ವಹಣೆಗೆ ತಕ್ಷಣದ ಕ್ರಮಕ್ಕಾಗಿ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯನ್ನು ಚುರುಕುಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.
ಜುಲೈ 1 ರಿಂದ 2022 ಮಾರ್ಚ್ 31 ರವರೆಗೆ ಹಂತ -2 ಅನ್ನು ಕೇಂದ್ರ ಮತ್ತು ರಾಜ್ಯಗಳ ಸಹಭಾಗಿತ್ವದೊಂದಿಗೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ಈ ಯೋಜನೆಗೆ ಕೇಂದ್ರದ ಪಾಲು 15 ಸಾವಿರ ಕೋಟಿ ರೂಪಾಯಿ
ಮತ್ತು ರಾಜ್ಯಗಳ ಪಾಲು 8,123 ಕೋಟಿ ರೂಪಾಯಿ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.