ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಬುಧವಾರ ಸೇವಾ ನಿವೃತ್ತಿ ಹೊಂದಿದ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅವರಿಗೆ ಬೀಳ್ಕೊಡುವ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ತೆಂಕನಿಡಿಯೂರು ಕಾಲೇಜಿನ ಅಭಿವೃದ್ಧಿಯಲ್ಲಿ ಬಾಲಕೃಷ್ಣ ಹೆಗ್ಡೆಯವರು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದಾರೆ. ಹುದ್ದೆಯಿಂದ ನಿವೃತ್ತರಾದರೂ ಪ್ರವೃತ್ತಿ, ಆಸಕ್ತಿ ಮತ್ತು ಹುಮ್ಮಸ್ಸಿನ ವಿಚಾರದಲ್ಲಿ ನಿವೃತ್ತಿ ಇರಬಾರದು. 37 ವರ್ಷಗಳ ಕಾಲ ಸುದೀರ್ಘ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಬಾಲಕೃಷ್ಣ ಹೆಗ್ಡೆಯವರ ಮುಂದಿನ ಜೀವನ ಸುಖಮಯವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಛೇರಿ ಮಂಗಳೂರು ಇದರ ಜಂಟಿ ನಿರ್ದೇಶಕ ಪ್ರೊ. ವಸಂತರಾಜ ಶೆಟ್ಟಿ, ವಿಶೇಷಾಧಿಕಾರಿ ಜಯಕರ ಭಂಡಾರಿ, ಡಾ. ಗಣನಾಥ ಶೆಟ್ಟಿ ಎಕ್ಕಾರು, ಡಾ. ಸುರೇಶ್ ರೈ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಆನಂದ ಸುವರ್ಣ, ಮಂಜುಳಾ ವಿ. ಪ್ರಸಾದ್, ನಗರಸಭಾ ಸದಸ್ಯರಾದ ವಿಜಯ್ ಕೊಡವೂರು, ದಯಾನಂದ ಶೆಟ್ಟಿ, ಪ್ರೊ. ಮಹೇಶ್ ರಾವ್ ಬೋಧಕರು ಬೋಧಕೇತರರು ಉಪಸ್ಥಿತರಿದ್ದರು.
ಐಕ್ಯೂಎಸಿ ಸಂಯೋಜಕ ಡಾ. ಸುರೇಶ್ ರೈ ಸ್ವಾಗತಿಸಿ, ಸ್ಟಾಫ್ ಕ್ಲಬ್ ಕಾರ್ಯದರ್ಶಿ ಬಸವರಾಜ್ ವಂದಿಸಿದರು. ಸಮಾಜಕಾರ್ಯ ಸಂಯೋಜಕ ಡಾ. ದುಗ್ಗಪ್ಪ ಕಜೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಅಧಿಕಾರ ಸ್ವೀಕಾರ:
ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇದರ ನೂತನ ಪ್ರಾಂಶುಪಾಲರಾಗಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಬುಧವಾರ ಅಧಿಕಾರ ಸ್ವೀಕರಿಸಿದರು.