ನವದೆಹಲಿ: ಕುಖ್ಯಾತ ಪಾತಕಿಯ ಮೇಲೆ ವಿರೋಧಿ ಬಣದವರು ನ್ಯಾಯಾಲಯದಲ್ಲೇ ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಉತ್ತರ ದೆಹಲಿಯ ರೋಹಿಣಿ ನ್ಯಾಯಾಲಯದ ಸಂಕೀರ್ಣದಲ್ಲಿ ಇಂದು ನಡೆದಿದೆ.
ಕುಖ್ಯಾತ ಪಾತಕಿ ಜಿತೇಂದರ್ ಮನ್ ಗೋಗಿಯ ವಿಚಾರಣೆ ನಡೆಸಲು ಈತನನ್ನು ದೆಹಲಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತಿದ್ದ ಸಂದರ್ಭದಲ್ಲಿ ‘ವಕೀಲರ ಧಿರಿಸಿನಲ್ಲಿ’ ಈತನ ಬರುವಿಕೆಗಾಗಿ ಹೊಂಚು ಹಾಕಿ ಕುಳಿತಿದ್ದ ವಿರೋಧಿ ಗ್ಯಾಂಗಿನ ರೌಡಿಗಳು ಈತನನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದರು. ತಕ್ಷಣ ಪ್ರತಿದಾಳಿ ನಡೆಸಿದ ದೆಹಲಿ ಪೋಲಿಸರು ಮೂವರು ಹಂತಕರನ್ನು ಸ್ಥಳದಲ್ಲೇ ಹೊಡೆದುರುಳಿಸಿದರು. ವಿರೋಧಿ ಗ್ಯಾಂಗಿನ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಪಾತಕಿ ಜಿತೇಂದರ್ ಮನ್ ಗೋಗಿ ಮೃತಪಟ್ಟಿದ್ದಾನೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೆಲವು ಮಂದಿ ಗಾಯಗೊಂಡಿದ್ದಾರೆ. ನ್ಯಾಯಾಲಯದಲ್ಲೇ ಇಂತಹ ಘಟನೆ ಸಂಭವಿಸಿದ್ದು ಭದ್ರತೆಯ ಲೋಪ ಎದ್ದು ಕಾಣುತ್ತಿದೆ ಎಂಬ ಕೂಗು ಕೇಳಿಬಂದಿದೆ.