ಮುಂಬೈ: ಐಷಾರಾಮಿ ಹಡಗಿನಲ್ಲಿ ನಿನ್ನೆ ರಾತ್ರಿ ನಡೆದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸಹಿತ 3 ಮಂದಿಯನ್ನು ಎನ್.ಸಿ.ಬಿ (ಮಾದಕ ವಸ್ತು ನಿಗ್ರಹ ದಳ) ಬಂಧಿಸಿದೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್, ಅರ್ಬಾಸ್ ಸೇಠ್ ಮರ್ಚಂಟ್, ಮುನ್ಮುನ್ ಧಮೆಚಾ ಬಂಧಿತರು. ನೂಪುರ್ ಸಾರಿಕ, ಇಸ್ಮೀತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಚೋಕ್ಕರ್, ಗೋಮಿತ್ ಚೋಪ್ರಾ ಇವರುಗಳನ್ನು ಎನ್.ಸಿ.ಬಿ ಹಡಗಿನಿಂದ ನೇರವಾಗಿ ಕಛೇರಿಗೆ ಕರೆತಂದು ಘಟನೆಗೆ ಸಂಬಂಧಿಸಿದಂತೆ ಹಾಗೂ ಇವರುಗಳಿಗೆ ಡ್ರಗ್ಸ್ ಜಾಲದ ನಂಟಿದೆಯೇ ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳುವ ಸಲುವಾಗಿ ವಿಚಾರಣೆ ನಡೆಸಿದ್ದು ಮೂವರು ಬಂಧಿತರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಎನ್.ಸಿ.ಬಿ ಮುಂಬೈ ನಿರ್ದೇಶಕ ಸಮೀರ್ ವಾಂಖೆಡೆ ತಿಳಿಸಿದ್ದಾರೆ.
ಐಷಾರಾಮಿ ಹಡಗಿನಲ್ಲಿ ನಿನ್ನೆ ನಡೆದ ರೇವ್ ಪಾರ್ಟಿಯ ಸ್ಥಳದಿಂದ ಡ್ರಗ್ಸ್ ಸೀಜ್ ಮಾಡಲಾಗಿದೆ ಎಂದು ಎನ್.ಸಿ.ಬಿ ತಿಳಿಸಿದೆ. ಡ್ರಗ್ಸ್ ಜಾಲದಲ್ಲಿ ಎಷ್ಟೇ ಪ್ರಭಾವಿ ವ್ಯಕ್ತಿಗಳು ಇದ್ದರೆ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಕಳೆದ ಒಂದು ವರ್ಷದಲ್ಲಿ ಮುಂಬೈಯಲ್ಲಿ 300ಕ್ಕೂ ಹೆಚ್ಚಿನ ಕಡೆಗಳಲ್ಲಿ ಎನ್.ಸಿ.ಬಿ ದಾಳಿ ನಡೆಸಿದೆ.
ಹಡಗಿನಲ್ಲಿ ರೋಚಕ ಕಾರ್ಯಾಚರಣೆ:
ಉದ್ಯಮಿಗಳ, ಬಾಲಿವುಡ್ ನಟರ ಮಕ್ಕಳು ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ನಡೆಸಲಿದ್ದಾರೆ ಎಂಬ ಸುಳಿವು ಎನ್.ಸಿ.ಬಿ ಮುಂಬೈ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ತಂಡಕ್ಕೆ ಎರಡು ವಾರಗಳ ಹಿಂದೆಯೇ ಸಿಕ್ಕಿತು. ಈ ಪಾರ್ಟಿಯಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ಬಳಕೆಯಾಗುವ ಸಾಧ್ಯತೆಯಿದೆ ಎಂಬ ಖಚಿತ ಮಾಹಿತಿ ಪಡೆದ ಅವರು ಮಾರುವೇಷದಲ್ಲಿ ಪ್ರಯಾಣಿಕರ ಟಿಕೆಟ್ ಖರೀದಿಸಿ ಹಡಗಿನಲ್ಲಿ ಯಾರಿಗೂ ಅನುಮಾನ ಬರದಂತೆ ಕಾರ್ಯಾಚರಣೆ ಆರಂಭಿಸಿದರು.
ಮುಂಬೈಯಿಂದ ಗೋವಾಗೆ ಹೊರಟ ಐಷಾರಾಮಿ ಕೊರ್ಡಿಯೆಲಾ ಕ್ರೂಸ್ ಹಡಗು ಕಡಲಿನ ಮಧ್ಯಭಾಗಕ್ಕೆ ತೆರಳುತ್ತಿದ್ದಂತೆ ಪಾರ್ಟಿ ಆರಂಭವಾಯಿತು. ಪಾರ್ಟಿಯಲ್ಲಿದ್ದವರು ಡ್ರಗ್ಸ್ ಸೇವಿಸುತ್ತಿದ್ದಂತೆ ಪ್ರಯಾಣಿಕರಂತೆ ನಟಿಸಿ ಮಾರುವೇಷದಲ್ಲಿದ್ದ ಎನ್.ಸಿ.ಬಿ ಪಡೆ ಕಾರ್ಯಾಚರಣೆ ಚುರುಕುಗೊಳಿಸಿ ರೆಡ್ ಹ್ಯಾಂಡ್ ಆಗಿ ಪಾರ್ಟಿ ನಡೆಸುತ್ತಿದ್ದವರನ್ನು ಸುತ್ತುವರಿದು ಮಾದಕ ಪದಾರ್ಥಗಳಾದ ಕೊಕೈನ್, ಹಶೀಶ್ ಮತ್ತು ಎಂ.ಡಿ ವಶಕ್ಕೆ ಪಡೆದರು.
ಗೋವಾಗೆ ಹೊರಟ ಹಡಗು ವಾಪಾಸು ಮುಂಬೈಗೆ:
ಚಾಲಕನಿಗೆ ಹಡಗನ್ನು ವಾಪಾಸು ಮುಂಬೈನತ್ತ ತಿರುಗಿಸಲು ಹೇಳಿದ ಎನ್.ಸಿ.ಬಿ, ಶಾರುಖ್ ಖಾನ್ ಪುತ್ರ ಸೇರಿದಂತೆ 8 ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದೆ.
ನಮಗೂ ಘಟನೆಗೂ ಸಂಬಂಧವಿಲ್ಲ: ಕೊರ್ಡಿಯೆಲಾ ಸಂಸ್ಥೆ
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಷಾರಾಮಿ ಕೊರ್ಡಿಯೆಲಾ ಹಡಗಿನ ಸಂಸ್ಥೆಯವರು, ನವದೆಹಲಿಯ ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ಖಾಸಗಿ ಕಾರ್ಯಕ್ರಮಕ್ಕಾಗಿ ನಮ್ಮ ಹಡಗನ್ನು ಬಾಡಿಗೆಗೆ ನೀಡಿದ್ದು ಅಲ್ಲಿ ನಡೆದ ಘಟನೆಗೆ ಮತ್ತು ನಮಗೆ ಯಾವುದೇ ಸಂಬಂಧವಿಲ್ಲ. ತನಿಖೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಿದ್ದೇವೆ ಎಂದು ಐಷಾರಾಮಿ ಹಡಗಿನ ಮುಖ್ಯಸ್ಥರು ಹೇಳಿಕೆ ನೀಡಿದ್ದಾರೆ.
ವಿಚಾರಣೆಯಲ್ಲಿ ಮತ್ತಷ್ಟು ಮಾಹಿತಿ:
ಶಾರುಖ್ ಖಾನ್ ಪುತ್ರ ಸೇರಿದಂತೆ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿಯಲ್ಲಿ ಮಾದಕ ವಸ್ತುಗಳ ಬಳಕೆಗೆ ಸಂಬಂಧಿಸಿದಂತೆ ಎನ್.ಸಿ.ಬಿ ವಶದಲ್ಲಿರುವವರು ನೀಡಿದ ಮಾಹಿತಿಯ ಮೇರೆ ನವಿ ಮುಂಬೈಯ ಹಲೆವೆಡೆ ಎನ್.ಸಿ.ಬಿ ದಾಳಿ ನಡೆಸುತ್ತಿದೆ. ಮೂಲಗಳ ಪ್ರಕಾರ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿಯ ಪ್ರವೇಶ ಶುಲ್ಕ ಒಂದು ಲಕ್ಷ!
ಪುತ್ರನ ಬಂಧನ, ನ್ಯಾಯಾಲಯದತ್ತ ಹೊರಟ ಶಾರುಖ್:
ಎನ್.ಸಿ.ಬಿ ವಶದಲ್ಲಿರುವ ಪುತ್ರ ಆರ್ಯನ್ ಖಾನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯನ್ನು ಮನಗಂಡು ಅವಸರದಲ್ಲಿಯೇ ಬಂದ್ರಾ ಬಂಗಲೆಯಿಂದ ಶಾರುಖ್ ಖಾನ್ ಕೋರ್ಟ್ ನತ್ತ ದೌಢಾಯಿಸಿದ್ದಾರೆ.