ಚೆನ್ನೈ: ಫೇಸ್ಬುಕ್ ನಲ್ಲಿ ಫೇಕ್ ಐಡಿಗಳ ಮೂಲಕ ಹಲವಾರು ಮಹಿಳೆಯರ ಸ್ನೇಹ ಸಂಪಾದಿಸಿ ಅವರ ಜೊತೆಗೆ ಸಲುಗೆಯಿಂದ ನಡೆಸಿದ ಸಂಭಾಷಣೆಗಳನ್ನು ಉಪಯೋಗಿಸಿ ಅವರನ್ನು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ ಫೇಕ್ ಐಡಿ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತಮಿಳುನಾಡಿನ ತಿರುಮುಲೈವೊಯಲ್ ನಿವಾಸಿ ಲೋಕೇಶ್ ಬಂಧಿತ ವ್ಯಕ್ತಿ.
ಈತ ಇಂಜಿನಿಯರಿಂಗ್ ಕಾಲೇಜು ಶಿಕ್ಷಣ ಅರ್ಧದಲ್ಲಿ ಮೊಟಕುಗೊಳಿಸಿ ಮನೆಹಾಳು ಕೆಲಸಕ್ಕೆ ಕೈ ಹಾಕಲು ಆರಂಭಿಸಿದ. ಜನವರಿಯಿಂದ ಫೇಕ್ ಚಿತ್ರಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಫೇಕ್ ಅಕೌಂಟ್ ಗಳನ್ನು ಸೃಷ್ಟಿಸಿ ದೇಶದ ವಿವಿಧ ಭಾಗಗಳ ಮಹಿಳೆಯರು ಮಾತ್ರವಲ್ಲದೇ ವಿದೇಶಗಳಲ್ಲಿ ನೆಲೆಸಿದ ಮಹಿಳೆಯರನ್ನೂ ಈತ ಟಾರ್ಗೆಟ್ ಮಾಡಿ ಸ್ನೇಹ ಸಂಪಾದಿಸುತ್ತಿದ್ದ.
ಒಂಟಿ ಅಥವಾ ಅವಿವಾಹಿತ ಮಹಿಳೆಯರ ಜೊತೆಗೆ ಈತ ಸಲುಗೆಯ ಸಂಭಾಷಣೆಗಳನ್ನು ನಡೆಸಿ ಅವರೂ ಅದೇ ರೀತಿಯ ಪ್ರತಿಕ್ರಿಯೆ ನೀಡಲು ವಾತಾವರಣ ನಿರ್ಮಿಸಿ ಬಳಿಕ ಈ ಸಂಭಾಷಣೆಗಳ ಸ್ಕ್ರೀನ್ ಶಾಟ್ ತೆಗೆದು ನಿಮ್ಮ ಪೋಷಕರು ಹಾಗೂ ಕುಟುಂಬದ ಸದಸ್ಯರಿಗೆ ತಲುಪುವಂತೆ ಮಾಡಿ ನಿಮ್ಮ ಜೀವನವನ್ನೇ ಹಾಳು ಮಾಡುತ್ತೇನೆ, ಇಲ್ಲದಿದ್ದರೆ ಇಷ್ಟು ಹಣ ಪಾವತಿಸಿ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದ.
ಹಣ ಮಾತ್ರವಲ್ಲದೇ ಈತ ಚಿನ್ನಾಭರಣಗಳನ್ನು ನೀಡುವಂತೆ ಪೀಡಿಸುತ್ತಿದ್ದ ಎಂದು ಕಾಲೇಜು ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಳು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸೈಬರ್ ಕ್ರೈಮ್ ಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಬಳಸಿ ಫೇಕ್ ಐಡಿ ವಂಚಕನನ್ನು ಬಂಧಿಸಿದ್ದಾರೆ.
ಈತ ಒಬ್ಬನೇ ಈ ದುಷ್ಕೃತ್ಯ ನಡೆಸುತ್ತಿದ್ದನೇ ಅಥವಾ ಇವನೊಂದಿಗೆ ಇತರರು ಸೇರಿ ಈ ಕೃತ್ಯ ಮಾಡಿರಬಹುದೇ ಎಂಬ ವಿಚಾರದ ಕುರಿತು ತನಿಖೆ ನಡೆಯುತ್ತಿದೆ.