ಕುಂದಾಪುರ: ಫೈನಾನ್ಶಿಯರ್ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣವನ್ನು ಕ್ಷಿಪ್ರವಾಗಿ ಉಡುಪಿ ಜಿಲ್ಲೆಯ ಪೊಲೀಸರು ಬೇಧಿಸಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಹಾಲಾಡಿ- ಕೋಟೇಶ್ವರ ಮುಖ್ಯ ರಸ್ತೆಯ ಕಾಳಾವರ ಸಮೀಪದ ಕಾಂಪ್ಲೆಕ್ಸ್ ಒಂದರಲ್ಲಿ ಫೈನಾನ್ಸ್ ಸಂಸ್ಥೆ ನಡೆಸುತ್ತಿದ್ದ ಅಜೇಂದ್ರ ಶೆಟ್ಟಿ (33) ಅವರನ್ನು ಶುಕ್ರವಾರ ತಡರಾತ್ರಿ ಕೊಲೆಗೈಯಲಾಗಿತ್ತು. ಕೊಲೆ ನಡೆದ ಬಳಿಕ ಪರಾರಿಯಾಗಿದ್ದ ಪಾಲುದಾರ ಅನೂಪ್ ಶೆಟ್ಟಿ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನಲೆಯಲ್ಲಿ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದರು.
ಅಜೇಂದ್ರ ಶೆಟ್ಟಿಯ ಫೈನಾನ್ಸ್ ಪಾಲುದಾರ ಕೊಲೆ ಆರೋಪಿ ಅನೂಪ್ ಶೆಟ್ಟಿ ಗೋವಾದ ಕೋಲ್ವಾ ಬೀಚ್ ಬಳಿ ಬಲೆಗೆ ಬಿದ್ದಿದ್ದಾನೆ. ಇಬ್ಬರ ನಡುವಿನ ಸ್ನೇಹ ಫೈನಾನ್ಸ್ ಸಂಸ್ಥೆ ಆರಂಭಿಸಲು ಕಾರಣವಾಗಿತ್ತು. ಆದರೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವೈಮನಸ್ಸು ಬೆಳೆಯಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಡ್ರೀಮ್ ಫೈನಾನ್ಸ್ ಪಾಲುದಾರ ಅಜೇಂದ್ರ ಶೆಟ್ಟಿಯ ಕಾರು ಅಪಘಾತಕ್ಕೀಡಾದ ಬೆನ್ನಲ್ಲೇ ಹೊಸ ಕಾರೊಂದನ್ನು ಖರೀದಿಸಿದ್ದರು. ಅನೂಪ್ ಶೆಟ್ಟಿಗೆ ಈ ವಿಚಾರದಲ್ಲೇ ಅಸಮಾಧಾನವಿತ್ತು.
ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಕುಂದಾಪುರ ಪೊಲೀಸ್ ಉಪಾಧೀಕ್ಷಕರಾದ ಕೆ. ಶ್ರೀಕಾಂತ್ ಮಾರ್ಗದರ್ಶನದಲ್ಲಿ, ಕುಂದಾಪುರ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಮತ್ತು ಬೈಂದೂರು ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ನೇತೃತ್ವದಲ್ಲಿ, ಕುಂದಾಪುರ ಉಪವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿ ಆರೋಪಿಯನ್ನು ಗೋವಾ ರಾಜ್ಯದ ಕೋಲ್ವಾ ಬೀಚ್ ಬಳಿ ಬಂಧಿಸಲಾಗಿದ್ದು ತನಿಖಾಧಿಕಾರಿಯವರ ಎದುರು ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕೊಲೆಯ ಬಗ್ಗೆ ಇನ್ನಷ್ಟು ಮಾಹಿತಿ ತನಿಖೆಯ ಬಳಿಕವಷ್ಟೇ ತಿಳಿಯಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.