ಅನ್ಲಾಕ್ ನಂತರ ಜನರ ವರ್ತನೆಗಳ ಆತಂಕ ಉಂಟುಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಶುಕ್ರವಾರ ಕೋವಿಡ್ ಪರಿಸ್ಥಿತಿ ಕುರಿತು ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ, ಕೇರಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ಕರೋನಾ ಮುಗಿದಿಲ್ಲ.
ಕೋವಿಡ್ 3ನೇ ಅಲೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕಳೆದ ಕೆಲವು ದಿನಗಳಲ್ಲಿ 6 ರಾಜ್ಯಗಳಿಂದ (ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ, ಕೇರಳ) ಶೇ. 80 ರಷ್ಟು ಹೊಸ ಪಾಸಿಟಿವ್ ಪ್ರಕರಣಗಳು ಬಂದಿವೆ.
ಕೋವಿಡ್-19 ಎದುರಿಸಲು ಭಾರತ ಸರ್ಕಾರ 23,000 ಕೋಟಿ ರೂ. ತುರ್ತು ಪ್ರತಿಕ್ರಿಯೆ ಪ್ಯಾಕೇಜ್ ಘೋಷಿಸಿದೆ. ಆರೋಗ್ಯ ಮೂಲ ಸೌಕರ್ಯಗಳನ್ನು ಬಲಪಡಿಸಲು ರಾಜ್ಯಗಳು ಈ ಪ್ಯಾಕೇಜ್ ಸದುಪಯೋಗಪಡಿಸಿಕೊಳ್ಳಬೇಕು. ಮೂಲಸೌಕರ್ಯದ ಅಂತರವನ್ನು ತುಂಬಬೇಕಾಗಿದೆ. ಸೋಂಕಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳತ್ತ ಗಮನ ಹರಿಸುವ ಅವಶ್ಯಕತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದರು.