ಪ್ರಯಾಗರಾಜ್, ಜೂನ್ 30: ಪ್ರಯಾಗರಾಜ್ ನಲ್ಲಿ ಹತ್ಯೆಗೀಡಾದ ದರೋಡೆಕೋರ ಮತ್ತು ರಾಜಕಾರಣಿ ಅತೀಕ್ ಅಹ್ಮದ್ ನಿಂದ ವಶಪಡಿಸಿಕೊಳ್ಳಲಾದ ಭೂಮಿಯಲ್ಲಿ ಬಡವರಿಗಾಗಿ ನಿರ್ಮಿಸಲಾದ ಫ್ಲ್ಯಾಟ್ ಗಳನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಉದ್ಘಾಟಿಸಿ, 76 ಫಲಾನುಭವಿಗಳಿಗೆ ಕೀಲಿಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಫಿಯಾದಿಂದ ವಶಪಡಿಸಿಕೊಳ್ಳಲಾದ ಭೂಮಿಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಫ್ಲ್ಯಾಟ್ ಗಳ ಕೀಲಿಗಳನ್ನು 76 ಕುಟುಂಬಗಳಿಗೆ ಹಸ್ತಾಂತರಿಸಲಾಗುತ್ತಿದೆ.
ಇದೇ ರಾಜ್ಯದಲ್ಲಿ 2017ಕ್ಕೂ ಮೊದಲು ಮಾಫಿಯಾದವರು ಬಡವರ, ಉದ್ಯಮಿಗಳ ಮತ್ತು ಸರ್ಕಾರದ ಭೂಮಿಯನ್ನು ಅತಿಕ್ರಮಿಸುತ್ತಿದ್ದರು. ಆದರೆ ಈಗ ಮಾಫಿಯಾದಿಂದ ಮುಕ್ತವಾದ ಭೂಮಿಯಲ್ಲಿ ವಸತಿ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಆಯಾ ಪ್ರದೇಶಗಳಲ್ಲಿ ಮಾಫಿಯಾದಿಂದ ಮುಕ್ತವಾದ ಭೂಮಿಯಲ್ಲಿ ಅಂತಹ ವಸತಿ ಘಟಕಗಳನ್ನು ನಿರ್ಮಿಸುವಂತೆ ಎಲ್ಲಾ ಅಧಿಕಾರಿಗಳಿಗೆ ಹೇಳುತ್ತೇನೆ. ಇದು ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ ಎಂದು ಅವರು ಹೇಳಿದರು.
ಫಲಾನುಭವಿಗಳಿಗೆ ಹಸ್ತಾಂತರಿಸುವ ಮೊದಲು ಫ್ಲ್ಯಾಟ್ ಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪರಿಶೀಲಿಸಿದರು. ವಸತಿ ಸಮುಚ್ಚಯವು ಎರಡು ಬ್ಲಾಕ್ ಗಳಲ್ಲಿ ಒಟ್ಟು 76 ಫ್ಲ್ಯಾಟ್ ಗಳನ್ನು ಹೊಂದಿದೆ. ಸಮುದಾಯ ಭವನ ಮತ್ತು ಒಂದು ಉದ್ಯಾನವನ್ನು ಒಳಗೊಂಡಿರುವ ಸಮುಚ್ಚಯದ ಯೋಜನೆಯನ್ನು ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ ಕೈಗೆತ್ತಿಕೊಂಡಿದೆ. 41 ಚದರ ಮೀಟರ್ ವಿಸ್ತೀರ್ಣದ ಪ್ರತಿ ಫ್ಲ್ಯಾಟ್ ಬೆಲೆ 3.5 ಲಕ್ಷ ರೂ ಆಗಿರುತ್ತದೆ.
2005ರಲ್ಲಿ ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ಹಾಗೂ 2023 ಫೆಬ್ರವರಿಯಲ್ಲಿ ನಡೆದ ಪ್ರಕರಣದ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಆರೋಪಿಯಾಗಿದ್ದ. ಏಪ್ರಿಲ್ 15 ರಂದು ಅತೀಕ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಪ್ರಯಾಗ್ರಾಜ್ ಸರ್ಕಾರಿ ಆಸ್ಪತ್ರೆಯ ಹೊರಗೆ ಪತ್ರಕರ್ತರ ಸೋಗಿನಲ್ಲಿ ಬಂದವರು ಗುಂಡಿಕ್ಕಿ ಕೊಂದಿದ್ದರು.