ನವದೆಹಲಿ: ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಬಿಜೆಪಿ ಕಟಿಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ಟೈಮ್ಸ್ ನೌ ಶೃಂಗ ಸಭೆ 2022ರಲ್ಲಿ ಮಾತನಾಡಿದ ಅವರು, ಆರ್ಟಿಕಲ್ 370 ವಿಚಾರವಾಗಿ ಕೈ ಹಾಕಬಾರದು ಎಂಬ ಎಚ್ಚರಿಕೆಗಳು ಬರುತ್ತಲೇ ಇದ್ದವು. ಇವುಗಳನ್ನು ಲೆಕ್ಕಿಸದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೃಢಅವದ ನಿರ್ಧಾರ ಕೈಗೊಂಡಿತು.
ಅಧಿಕಾರಕ್ಕೆ ಬಂದರೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಲಾಗುವುದು ಎಂದು ಜನಸಂಘದ ಕಾಲದಿಂದಲೂ ಬಿಜೆಪಿ ಪಕ್ಷ ಹೇಳುತ್ತಿರುವುದನ್ನು ಸ್ಮರಿಸಿದ ಅಮಿತ್ ಶಾ, ಈ ದೇಶದ ಜನತೆಗೆ ಕೊಟ್ಟ ಮಾತನ್ನು ಈಡೇರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಹೇಳಿದರು.
ಜಾತ್ಯತೀತ ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲ ಪ್ರಜೆಗಳಿಗೂ ಒಂದೇ ರೀತಿಯ ಕಾನೂನು ಇರಬೇಕು. ಸಂಸದೀಯ ಸಮಿತಿ ಕೂಡಾ ಸಂಸತ್‌ಗೆ ಇದೇ ಅಭಿಪ್ರಾಯವನ್ನು ಶಿಫಾರಸ್ಸು ಮಾಡಿದೆ. ಕೇಂದ್ರ ಸರ್ಕಾರವು ಶೀಘ್ರದಲ್ಲೇ ದೇಶಾದ್ಯಂತ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಗೆ ತರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.