ನವದೆಹಲಿ, ಜೂ.26: ಬಿಜೆಪಿಯ ಹಿರಿಯ ಸಂಸದ ಓಂ ಬಿರ್ಲಾ ಅವರು ಬುಧವಾರ 18ನೇ ಲೋಕಸಭೆಯ ಸ್ಪೀಕರ್ ಆಗಿ ಮರುಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಕಾಂಗ್ರೆಸ್ ಸಂಸದ ಕೆ ಸುರೇಶ್ ಅವರನ್ನು ಕಣಕ್ಕಿಳಿಸಿದ ಪ್ರತಿಪಕ್ಷಗಳು ಸದನದಲ್ಲಿ ಮತದಾನಕ್ಕೆ ಒತ್ತಾಯಿಸದ ಕಾರಣ ಧ್ವನಿ ಮತದ ಮೂಲಕ ಆಯ್ಕೆಯಾದರು. ಅವರ ಆಯ್ಕೆಯ ನಂತರ, ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಬಿರ್ಲಾ ಅವರನ್ನು ಸ್ಪೀಕರ್ ಕುರ್ಚಿಗೆ ಕರೆದೊಯ್ದರು. ಬಿರ್ಲಾ ಅವರು ಈ ಹಿಂದೆ ಕಳೆದ ಲೋಕಸಭೆಯಲ್ಲಿ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.
ಬಳಿಕ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, ಸಂಸದೀಯ ಮೌಲ್ಯಗಳು ಮತ್ತು ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಶ್ರೀಮಂತಗೊಳಿಸುವುದು ಆದ್ಯತೆಯಾಗಿದೆ. ಜನರ ನಿರೀಕ್ಷೆಗಳು, ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಪರಿಣಾಮಕಾರಿಯಾಗಿ ಈಡೇರಿಸುವ ಜವಾಬ್ದಾರಿ ಸಂಸದರ ಮೇಲಿದೆ ಎಂದರು. ಇದಕ್ಕೂ ಮುನ್ನ, ಬಿರ್ಲಾ ಅವರ ಮರು ಆಯ್ಕೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಬಿರ್ಲಾ ಅವರನ್ನು ಎರಡನೇ ಬಾರಿಗೆ ಮರು ಆಯ್ಕೆ ಮಾಡುವ ಮೂಲಕ ಇಂದು ಇತಿಹಾಸವನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ ಬಿರ್ಲಾ ಅವರ ಮಾರ್ಗದರ್ಶನಕ್ಕಾಗಿ ಸದನವು ಎದುರು ನೋಡುತ್ತಿದೆ. ಅವರ ಹಿಂದಿನ ಸಾಧನೆಗಳು ಹೊಸ ಸದಸ್ಯರಿಗೆ ಸ್ಫೂರ್ತಿಯಾಗಿದೆ. ಹಿಂದಿನ ಲೋಕಸಭೆಯು ಬಿರ್ಲಾ ಅವರ ನಾಯಕತ್ವದಲ್ಲಿ 97 ಪ್ರತಿಶತದಷ್ಟು ಉತ್ಪಾದಕತೆಯನ್ನು ಸಾಧಿಸಿದೆ ಎಂದರು. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಬಿರ್ಲಾ ಅವರನ್ನು ಅಭಿನಂದಿಸಿ ಮಾತನಾಡುತ್ತಾ, ಸದನವು ಜನರ ಧ್ವನಿಯನ್ನು ಪ್ರತಿನಿಧಿಸುತ್ತದೆ. ವಿರೋಧ ಪಕ್ಷವು ಈ ಬಾರಿ ಮತ್ತಷ್ಟು ಪ್ರಬಲವಾಗಿದ್ದು, ಜನತೆಯ ಧ್ವನಿಯನ್ನು ಪ್ರತಿನಿಧಿಸುತ್ತದೆ. ಸ್ಪೀಕರ್ ಅವರಿಗೆ ವಿರೋಧ ಪಕ್ಷವು ಸಂಪೂರ್ಣ ಸಹಕಾರ ನೀಡಲಿದೆ ಎಂದರು.