ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರೊಂದಿಗೆ ಇಂದು ನವದೆಹಲಿಯಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಇಬ್ಬರೂ ನಾಯಕರು ಉಭಯ ದೇಶಗಳ ನಡುವಿನ ಪಾಲುದಾರಿಕೆಯಲ್ಲಿ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಭಾರತ-ನೇಪಾಳ ಸಹಕಾರ ಕಾರ್ಯಸೂಚಿಯನ್ನು ಮತ್ತಷ್ಟು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಬಹದ್ದೂರ್ ದೇವುಬಾ ಜಂಟಿಯಾಗಿ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದರು. ಅವರು ಭಾರತದ ಬಿಹಾರದ ಜಯನಗರ ಮತ್ತು ನೇಪಾಳದ ಕುರ್ತಾ ನಡುವಿನ 35 ಕಿಲೋಮೀಟರ್ ಉದ್ದದ ಗಡಿಯಾಚೆಗಿನ ಪ್ರಯಾಣಿಕ ರೈಲು ಸೇವೆಗಳಿಗೆ ಚಾಲನೆ ನೀಡಿದರು. ಅವರು ಜಂಟಿಯಾಗಿ ಸೋಲು ಕಾರಿಡಾರ್ 132 ಕೆವಿ ಪವರ್ ಟ್ರಾನ್ಸ್‌ಮಿಷನ್ ಲೈನ್ ಮತ್ತು ನೇಪಾಳದಲ್ಲಿ ಭಾರತದ ಸರ್ಕಾರದ ಸಾಲದ ಅಡಿಯಲ್ಲಿ ನಿರ್ಮಿಸಲಾದ ಸಬ್‌ಸ್ಟೇಷನ್ ಅನ್ನು ಉದ್ಘಾಟಿಸಿದರು. ಉಭಯ ಪ್ರಧಾನ ಮಂತ್ರಿಗಳು ನೇಪಾಳದಲ್ಲಿ ರುಪೇ ಕಾರ್ಡ್ ಅನ್ನು ಬಿಡುಗಡೆ ಮಾಡಿದರು. ಆ ಬಳಿಕ ಉಭಯ ಪ್ರಧಾನಿಗಳ ಸಮ್ಮುಖದಲ್ಲಿ ನಾಲ್ಕು ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಉಭಯ ದೇಶಗಳ ನಡುವಿನ ಸಂಬಂಧದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಧಾನ ಮಂತ್ರಿಯಾಗಿ ದೇವುಬಾ ಅವರ ಐದನೇ ಭಾರತ ಭೇಟಿಯಾಗಿದೆ. ಈ ಎರಡು ದೇಶಗಳ ನಡುವಿನ ಸೌಹಾರ್ದ ಮತ್ತು ನಮ್ಮ ಜನರ ಪರಸ್ಪರ ಸಂಬಂಧದ ಇಂತಹ ಉದಾಹರಣೆ ಜಗತ್ತಿನಲ್ಲಿ ಬೇರೆಲ್ಲೂ ಕಾಣಸಿಗುವುದಿಲ್ಲ. ವಿದ್ಯುತ್ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳ ಲಾಭ ಪಡೆಯಲು ಎರಡೂ ಕಡೆಯವರು ಸಹ ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ನೇಪಾಳದ ಜಲವಿದ್ಯುತ್ ಅಭಿವೃದ್ಧಿ ಯೋಜನೆಗಳಲ್ಲಿ ಭಾರತೀಯ ಕಂಪನಿಗಳು ಹೆಚ್ಚಿನ ಪಾಲ್ಗೊಳ್ಳುವಿಕೆಯ ವಿಷಯದ ಬಗ್ಗೆ ಭಾರತ ಸರ್ಕಾರವು ಸಹ ಒಪ್ಪಿಕೊಂಡಿದೆ. ನೇಪಾಳವು ಅಂತರಾಷ್ಟ್ರೀಯ ಸೌರ ಒಕ್ಕೂಟದ ಸದಸ್ಯತ್ವ ಪಡೆದಿದೆ ಮತ್ತು ಇದು ನಮ್ಮ ಪ್ರದೇಶದಲ್ಲಿ ಸುಸ್ಥಿರ, ಕೈಗೆಟುಕುವ ಮತ್ತು ಶುದ್ಧ ಇಂಧನವನ್ನು ಉತ್ತೇಜಿಸುತ್ತದೆ ಎಂದು ಭಾರತದ ಪ್ರಧಾನಿ ಸಂತೋಷ ವ್ಯಕ್ತಪಡಿಸಿದರು.
ಎಲ್ಲಾ ರೀತಿಯಲ್ಲೂ ವ್ಯಾಪಾರ ಮತ್ತು ಗಡಿಯಾಚೆಗಿನ ಸಂಪರ್ಕ ಉಪಕ್ರಮಗಳಿಗೆ ಆದ್ಯತೆ ನೀಡಲು ನಾವು ಒಪ್ಪಿಕೊಂಡಿದ್ದೇವೆ. ಜಯನಗರ-ಕುರ್ತಾ ರೈಲು ಮಾರ್ಗದ ಪ್ರಾರಂಭವು ಇದರ ಒಂದು ಭಾಗವಾಗಿದೆ. ನೇಪಾಳದಲ್ಲಿ ರುಪೇ ಕಾರ್ಡ್‌ನ ಪರಿಚಯವು ನಮ್ಮ ಆರ್ಥಿಕ ಸಂಪರ್ಕಕ್ಕೆ ಹೊಸ ಅಧ್ಯಾಯವನ್ನು ಸೇರಿಸುತ್ತದೆ ಮತ್ತು ನೇಪಾಳ ಪೊಲೀಸ್ ಅಕಾಡೆಮಿ, ನೇಪಾಳಗಂಜ್‌ನ ಇಂಟಿಗ್ರೇಟೆಡ್ ಚೆಕ್‌ಪೋಸ್ಟ್ ಮತ್ತು ರಾಮಾಯಣ ಸರ್ಕ್ಯೂಟ್‌ನಂತಹ ಇತರ ಯೋಜನೆಗಳು ಉಭಯ ದೇಶಗಳನ್ನು ಹತ್ತಿರ ತರುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.