ರಾಜ್‌ಗೀರ್, ಜೂ.19: ಬಿಹಾರದ ರಾಜ್‌ಗೀರ್ ನಲ್ಲಿ ಬುಧವಾರ ನಳಂದಾ ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಶ್ವವಿದ್ಯಾನಿಲಯದ ಪುನರುಜ್ಜೀವನವು ಉದಯೋನ್ಮುಖ ಭಾರತದ ಸಾಮರ್ಥ್ಯ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ ಎಂದು ಹೇಳಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿಪಡಿಸುವಲ್ಲಿ ಜ್ಞಾನವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ರಾಜ್‌ಗೀರ್‌ನ ನಳಂದ ವಿಶ್ವವಿದ್ಯಾಲಯದ ಸುಷ್ಮಾ ಸ್ವರಾಜ್ ಸಭಾಂಗಣದಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಶಿಕ್ಷಣವನ್ನು ಬಲಪಡಿಸುವ ಮೂಲಕ ಭಾರತವು ಸೂಪರ್ ಪವರ್ ಸ್ಥಾನವನ್ನು ಸಾಧಿಸಬಹುದು. ನಳಂದ ವಿಶ್ವವಿದ್ಯಾನಿಲಯವು ನಮ್ಮ ಅಸ್ಮಿತೆ ಮತ್ತು ಸಂಪ್ರದಾಯಗಳನ್ನು ಜಗತ್ತಿಗೆ ಉತ್ತಮ ಉದಾಹರಣೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಗುರುತನ್ನು ನೀಡುವ ಮೂಲಕ ಭಾರತವನ್ನು ಅತ್ಯುನ್ನತ ಜ್ಞಾನ ಕೇಂದ್ರವಾಗಿ ಮರುಸ್ಥಾಪಿಸಲು ತಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದರು.
ಪುರಾತನ ವಿಶ್ವವಿದ್ಯಾನಿಲಯದ ಇತಿಹಾಸವನ್ನು ಶ್ಲಾಘಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ನಳಂದ ವಿಶ್ವವಿದ್ಯಾಲಯಕ್ಕೆ ಭವ್ಯ ಇತಿಹಾಸವಿದೆ. ಪ್ರಾಚೀನ ಕಾಲದಲ್ಲಿ ನಳಂದ ವಿಶ್ವವಿದ್ಯಾಲಯವನ್ನು ಶಿಕ್ಷಣದ ಕೇಂದ್ರವೆಂದು ಗುರುತಿಸಲಾಗಿತ್ತು ಎಂದರು.
ವಿಶ್ವ ಪರಂಪರೆಯೆಂದು ಗುರುತಿಸಲ್ಪಟ್ಟಿರುವ ಪ್ರಾಚೀನ ನಳಂದಾ ವಿಶ್ವವಿದ್ಯಾಲಯದ ಅವಶೇಷಗಳಿಗೂ ಪ್ರಧಾನಮಂತ್ರಿ ಭೇಟಿ ನೀಡಿದರು. ವಿದೇಶಾಂಗ ಸಚಿವ ಎಸ್. ಜೈಶಂಕರ್, ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್, ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಮುಂತಾದವರು ಉಪಸ್ಥಿತರಿದ್ದರು. 17 ದೇಶಗಳ ರಾಯಭಾರಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.