ನವದೆಹಲಿ, ಫೆ.4: ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಉತ್ತರಿಸುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಅವರನ್ನು ಟೀಕಿಸಿದ ಪ್ರಧಾನಿ ಮೋದಿ, “ಬಡವರ ಗುಡಿಸಲುಗಳಲ್ಲಿ ಫೋಟೋ ಸೆಷನ್ ಮಾಡಿಸಿಕೊಂಡು ಮನರಂಜನೆ ಪಡೆಯುವವರಿಗೆ ಸಂಸತ್ತಿನಲ್ಲಿ ಬಡವರ ಬಗ್ಗೆ ಮಾತನಾಡುವುದೇ ಬೇಸರ ತರಿಸುತ್ತದೆ” ಎಂದು ಹೇಳಿದರು.
ಕೆಲವು ನಾಯಕರು “ನಗರ ನಕ್ಸಲರ ಭಾಷೆ” ಮಾತನಾಡುತ್ತಿದ್ದಾರೆ ಮತ್ತು ಸುಳ್ಳು ಭರವಸೆಗಳೊಂದಿಗೆ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.”ಇಂದು ಕೆಲವರು ನಗರ ನಕ್ಸಲರ ಭಾಷೆಯನ್ನು ಬಹಿರಂಗವಾಗಿ ಮಾತನಾಡುತ್ತಿದ್ದಾರೆ, ಭಾರತದ ವಿರುದ್ದವೇ ಹೋರಾಟ ನಡೆಸುತ್ತಿರುವುದು ದುರದೃಷ್ಟಕರ. ಇಂತವರಿಗೆ ಸಂವಿಧಾನ ಅಥವಾ ರಾಷ್ಟ್ರದ ಏಕತೆ ಅರ್ಥವಾಗುವುದಿಲ್ಲ” ಎಂದು ನರೇಂದ್ರ ಮೋದಿ ಹೇಳಿದರು.
ಜನವರಿ 15 ರಂದು ರಾಹುಲ್ ಗಾಂಧಿ ಅವರು “ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿವೆ, ಮತ್ತು ನಾವು ಈಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತ ರಾಜ್ಯದ ವಿರುದ್ದ ಹೋರಾಟ ಮಾಡಬೇಕಿದೆ ಎಂದು ಹೇಳಿದ್ದರು. ಗುವಾಹಟಿಯ ಪಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೆಹಲಿಯ ಕೋಟ್ಲಾ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಹೊಸ ಪ್ರಧಾನ ಕಚೇರಿಯ ಉದ್ಘಾಟನೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮೋದಿ, ದಶಕಗಳಿಂದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿದ್ದು, ಇದು ಜನರಿಗೆ ಮತ್ತು ಸಂವಿಧಾನಕ್ಕೆ “ಅನ್ಯಾಯ” ಎಂದು ಹೇಳಿದರು. ನಾವು ಸಂವಿಧಾನದ ಆಶಯದಂತೆ ಬದುಕುತ್ತೇವೆ ಮತ್ತು ಅದಕ್ಕಾಗಿಯೇ ನಾವು ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ನಮ್ಮ ಸಂವಿಧಾನವು ತಾರತಮ್ಯ ಮಾಡುವ ಹಕ್ಕನ್ನು ನೀಡುವುದಿಲ್ಲ, ಎಂದು ಪ್ರಧಾನಿ ಮೋದಿ ಹೇಳಿದರು.
ವಿರೋಧ ಪಕ್ಷಗಳು ಈಡೇರದ ಭರವಸೆಗಳೊಂದಿಗೆ ಯುವಕರನ್ನು ದಾರಿ ತಪ್ಪಿಸುತ್ತಿವೆ ಎಂದು ಮೋದಿ ಆರೋಪಿಸಿದರು. “ನಾವು ಯುವಕರ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಯುವಕರನ್ನು ವಂಚಿಸುತ್ತಿರುವ ಕೆಲವು ಪಕ್ಷಗಳಿವೆ. ಅವರು ಚುನಾವಣೆಯ ಸಮಯದಲ್ಲಿ ಭತ್ಯೆಗಳನ್ನು ಭರವಸೆ ನೀಡುತ್ತಾರೆ ಆದರೆ ಆ ಭರವಸೆಗಳನ್ನು ಈಡೇರಿಸುವುದಿಲ್ಲ. ಈ ಪಕ್ಷಗಳು ಯುವಕರ ಭವಿಷ್ಯವನ್ನು ಕತ್ತಲಲ್ಲಿ ಹಾಕಿವೆ ಎಂದು ಅವರು ಹೇಳಿದರು.