ನವದೆಹಲಿ, ಆ.14: ಅಡೆತಡೆಗಳ ಹೊರತಾಗಿಯೂ ಭಾರತದ ಜಿಡಿಪಿ ಬೆಳವಣಿಗೆ ಶ್ಲಾಘನೀಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು. 77ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ, ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಅವರು ಮಾತನಾಡಿದರು. ರಾಷ್ಟ್ರಪತಿಯಾದ ನಂತರ ಇದು ಅವರ ಎರಡನೆಯ ಸ್ವಾತಂತ್ರ್ಯೋತ್ಸವ ಸಂದೇಶವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ ಎಂದು ಹೇಳಿದ ರಾಷ್ಟ್ರಪತಿ, ಭಾರತೀಯರಲ್ಲಿ ಹೊಸ ಉತ್ಸಾಹ ಎದ್ದು ಕಾಣುತ್ತಿದೆ. ನಾನು ಹಲವು ಕಡೆಗಳಲ್ಲಿ ಜನರೊಂದಿಗೆ ಮಾತನಾಡುವಾಗ ಇದು ನನ್ನ ಅರಿವಿಗೆ ಬಂದಿದೆ ಎಂದರು. ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ಎತ್ತರವನ್ನು ತಲುಪಿರುವುದು ಅಭಿನಂದನೀಯ. ನವ ಭಾರತದ ಉದ್ದೇಶಗಳು ಅಪರಿಮಿತ ಆಯಾಮಗಳನ್ನು ಹೊಂದಿವೆ. ಜಿ೨೦ ಅಧ್ಯಕ್ಷ ಸ್ಥಾನವು ಜಾಅಗತಿಕ ಮಟ್ಟದಲ್ಲಿ ಭಾರತದ ನಾಯಕತ್ವವನ್ನು ಪರಿಚಯಿಸುವ ವೇದಿಕೆಯಾಗಿದೆ.
ವಿಶ್ವದಾದ್ಯಂತ ಅಭಿವೃದ್ಧಿ ಮತ್ತು ಮಾನವೀಯ ಗುರಿಗಳನ್ನು ಉತ್ತೇಜಿಸುವಲ್ಲಿ ಭಾರತ ನಿರ್ಣಾಯಕ ಪಾತ್ರ ವಹಿಸುತ್ತಿದೆ. ವ್ಯಾಪಾರ ಮತ್ತು ಹಣಕಾಸು ಕ್ಷೇತ್ರದಲ್ಲಿ ಭಾರತವು ಕೈಗೊಳ್ಳಲಿರುವ ನಿರ್ಧಾರ ಪ್ರಗತಿಯತ್ತ ಕೊಂಡೊಯ್ಯಲಿದೆ. ದೇಶದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರವು ಚಿಂತೆಗೆ ಕಾರಣವಾಗಿದೆ. ಆದರೆ ಭಾರತದಲ್ಲಿ, ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಸರ್ಕಾರವು ಸಾಮಾನ್ಯ ಜನರನ್ನು ಹೆಚ್ಚಿನ ಹಣದುಬ್ಬರದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಬಡವರಿಗೆ ಹೆಚ್ಚು ವ್ಯಾಪಕವಾದ ಭದ್ರತಾ ರಕ್ಷಣೆಯನ್ನು ಒದಗಿಸಿದೆ. ಜಾಗತಿಕ ಆರ್ಥಿಕ ಬೆಳವಣಿಗೆಗಾಗಿ ಜಗತ್ತು ಭಾರತದತ್ತ ನೋಡುತ್ತಿದೆ.
ದುರಾಸೆಯ ಸಂಸ್ಕೃತಿಯು ಜಗತ್ತನ್ನು ಪ್ರಕೃತಿಯಿಂದ ದೂರ ಕರೆದೊಯ್ಯುತ್ತದೆ. ನಮ್ಮ ಬೇರುಗಳಿಗೆ ಮರಳುವ ಅಗತ್ಯವನ್ನು ನಾವು ಈಗ ಅರಿತುಕೊಂಡಿದ್ದೇವೆ. ಪ್ರಕೃತಿಗೆ ಬಹಳ ಹತ್ತಿರದಲ್ಲಿ ಮತ್ತು ಅದರೊಂದಿಗೆ ಸಾಮರಸ್ಯದಿಂದ ವಾಸಿಸುವ ಅನೇಕ ಬುಡಕಟ್ಟು ಸಮುದಾಯಗಳು ಇನ್ನೂ ಇವೆ ಎಂದು ನನಗೆ ತಿಳಿದಿದೆ. ಅವರ ಮೌಲ್ಯಗಳು ಮತ್ತು ಜೀವನಶೈಲಿ ಹವಾಮಾನ ಕ್ರಿಯೆಗೆ ಅಮೂಲ್ಯವಾದ ಪಾಠಗಳನ್ನು ನೀಡುತ್ತದೆ. ಯುಗಯುಗಗಳಿಂದ ಬುಡಕಟ್ಟು ಸಮುದಾಯಗಳ ಉಳಿವಿನ ರಹಸ್ಯವನ್ನು ಒಂದೇ ಪದದಲ್ಲಿ ಸಂಕ್ಷಿಪ್ತಗೊಳಿಸಬಹುದು. ಆ ಒಂದು ಪದ ‘ಅನುಭೂತಿ’. ಅವರು ಪ್ರಕೃತಿ ಮಾತೆಯ ಮಕ್ಕಳು, ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ. ಆದಾಗ್ಯೂ, ಕೆಲವೊಮ್ಮೆ, ಜಗತ್ತು ಅನುಭೂತಿಯ ಕೊರತೆಯಿಂದ ಬಳಲುತ್ತಿರುವಂತೆ ತೋರುತ್ತದೆ.
ನಮ್ಮ ದೇಶವು ಹೊಸ ಸಂಕಲ್ಪಗಳೊಂದಿಗೆ ‘ಅಮೃತ ಕಾಲ’ವನ್ನು ಪ್ರವೇಶಿಸಿದೆ ಮತ್ತು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವತ್ತ ನಾವು ಮುಂದುವರಿಯುತ್ತಿದ್ದೇವೆ. ವೈಯಕ್ತಿಕ ಮತ್ತು ಸಾಮೂಹಿಕ ಚಟುವಟಿಕೆಯ ಎಲ್ಲಾ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಶ್ರಮಿಸುವ ನಮ್ಮ ಮೂಲಭೂತ ಕರ್ತವ್ಯವನ್ನು ನಿರ್ವಹಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ, ಇದರಿಂದ ರಾಷ್ಟ್ರವು ನಿರಂತರವಾಗಿ ಉನ್ನತ ಮಟ್ಟದ ಪ್ರಯತ್ನ ಮತ್ತು ಸಾಧನೆಗೆ ಏರುತ್ತದೆ. ನಮ್ಮ ಸಂವಿಧಾನವು ನಮ್ಮ ಮಾರ್ಗದರ್ಶಿ ದಾಖಲೆಯಾಗಿದೆ. ಅದರ ಪೀಠಿಕೆ ನಮ್ಮ ಸ್ವಾತಂತ್ರ್ಯ ಹೋರಾಟದ ಆದರ್ಶಗಳನ್ನು ಒಳಗೊಂಡಿದೆ. ನಮ್ಮ ರಾಷ್ಟ್ರ ನಿರ್ಮಾತೃಗಳ ಕನಸುಗಳನ್ನು ನನಸಾಗಿಸಲು ನಾವು ಸಾಮರಸ್ಯ ಮತ್ತು ಸಹೋದರತ್ವದ ಮನೋಭಾವದಿಂದ ಮುಂದುವರಿಯೋಣ. ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು, ನಾನು ಮತ್ತೊಮ್ಮೆ ನಿಮಗೆ, ವಿಶೇಷವಾಗಿ ಗಡಿಗಳನ್ನು ಕಾಯುವ ನಮ್ಮ ಸೈನಿಕರಿಗೆ, ಪೊಲೀಸರಿಗೆ ಮತ್ತು ವಿಶ್ವದ ಪ್ರತಿಯೊಂದು ಭಾಗದಲ್ಲಿ ವಾಸಿಸುವ ಭಾರತೀಯರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದು ರಾಷ್ಟ್ರಪತಿ ತಮ್ಮ ಸಂದೇಶಕ್ಕೆ ಪೂರ್ಣವಿರಾಮ ನೀಡಿದರು.