ವಯನಾಡ್, ಆ.10: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸಂತ್ರಸ್ತರಾದವರ ಬೆನ್ನಿಗೆ ಇಡೀ ದೇಶ ಮತ್ತು ಕೇಂದ್ರ ಸರ್ಕಾರ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರ ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜತೆಗೆ ವೈಮಾನಿಕ ಸಮೀಕ್ಷೆ ನಡೆಸಿ ಬಳಿಕ ವಯನಾಡ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪರಿಹಾರ ಕಾರ್ಯಗಳಿಗೆ ನೆರವು ನೀಡಲು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ರಾಜ್ಯ ಸರ್ಕಾರಕ್ಕೆ ಭರವಸೆ ನೀಡಿದರು. ಸಂತ್ರಸ್ತ ಜನರ ಭವಿಷ್ಯ ಮತ್ತು ಕನಸುಗಳನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವ ಸುರೇಶ್ ಗೋಪಿ, ಸಂಪುಟ ಉಪ ಸಮಿತಿಯ ರಾಜ್ಯ ಸಚಿವರು ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಕೂಡ ಪ್ರಧಾನಿ ಭೇಟಿಯಾಗಿ ಶೀಘ್ರದಲ್ಲಿ ಗುಣಮುಖರಾಗಿ ಎಂದು ಹಾರೈಸಿದರು.
ರಾಜ್ಯ ಮುಖ್ಯ ಕಾರ್ಯದರ್ಶಿ ಡಾ.ವಿ.ವೇಣು ಅವರು ಭೂಕುಸಿತ ಪೀಡಿತ ಪ್ರದೇಶಗಳನ್ನು ಪುನರ್‌ನಿರ್ಮಾಣ ಮಾಡಲು ಮತ್ತು ಸಂತ್ರಸ್ತರ ಪುನರ್ವಸತಿಗೆ ಕೇಂದ್ರದಿಂದ ಅಗತ್ಯವಿರುವ ಬೆಂಬಲದ ಕುರಿತು ಪ್ರಧಾನಿಗೆ ವಿವರಿಸಿದರು.