ನವದೆಹಲಿ: 75 ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದವರ ತ್ಯಾಗ ಬಲಿದಾನ ನಮಗೆಲ್ಲರಿಗೂ ವಿಶೇಷ ಶಕ್ತಿ ನೀಡುತ್ತದೆ. ನೆಹರು, ಸರ್ದಾರ್ ಪಟೇಲ್ ದೇಶವನ್ನು ಒಗ್ಗೂಡಿಸಲು ವಿಶೇಷವಾಗಿ ಪ್ರಯತ್ನಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತಕ್ಕೆ ಭವಿಷ್ಯದ ದಾರಿ ತೋರಿಸಿದರು. ದೇಶವು ಅವರೆಲ್ಲರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತಿದೆ. ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದವರೆಲ್ಲರೂ ಯುವ ಪೀಳಿಗೆಗೆ ಸ್ಫೂರ್ತಿ ನೀಡಿದ್ದಾರೆ.
ಕರೋನಾ ದೇಶದ ಮುಂದೆ ದೊಡ್ಡ ಸವಾಲನ್ನು ತಂದಿದೆ. ಮಾನವೀಯತೆಯಿಂದ ದೇಶದ ಜನರು ಸಾಂಘಿಕ ಪ್ರಯತ್ನದಿಂದ ಕೋವಿಡ್ ವಿರುದ್ಧ ಯುದ್ಧವನ್ನು ನಡೆಸಿ ಯಶಸ್ವಿಯಾಗುವ ಹಂತದಲ್ಲಿದ್ದಾರೆ. ಕೊರೊನಾ ಸೇನಾನಿಗಳ ಶ್ಲಾಘನೀಯ ಕಾರ್ಯಗಳಿಂದ ದೇಶವು ಕೊರೊನಾ ಸವಾಲನ್ನು ಮೆಟ್ಟಿ ನಿಂತಿದೆ. ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಕೈಗೊಳ್ಳಲು ನಮ್ಮ ವಿಜ್ಞಾನಿಗಳ ಶ್ರಮ ಪ್ರಮುಖ ಪಾತ್ರ ವಹಿಸಿದೆ. ಕೋವಿಡ್ ವ್ಯಾಕ್ಸಿನೇಷನ್ ನಂತರ ಡಿಜಿಟಲ್ ಸರ್ಟಿಫಿಕೇಟ್ ನೀಡುವ ವಿಚಾರವು ವಿಶ್ವದ ಗಮನ ಸೆಳೆದಿದೆ.
ರಾಷ್ಟ್ರದ ಅಭಿವೃದ್ಧಿಯ ಗುರಿಯೆಂದರೆ ಅದು ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಹೊಂದಿರುವುದಲ್ಲದೇ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ. ಈ ಮಂತ್ರದೊಂದಿಗೆ ನಾವು ಮುಂದುವರಿಯಬೇಕಾಗಿದೆ. 100 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವಾಗ ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಗುರಿಯನ್ನು ನಾವೆಲ್ಲರೂ ಈಡೇರಿಸಬೇಕು. ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ರಾಷ್ಟ್ರದ ಎಲ್ಲಾ ಕನಸುಗಳನ್ನು ಈಡೇರಿಸುವಲ್ಲಿ ಮುಖ್ಯವಾಗಿದೆ. ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ, ಪಿಂಚಣಿ ಯೋಜನೆ, ಆವಾಸ್ ಯೋಜನೆ ಮುಂತಾದ ಯೋಜನೆಗಳೊಂದಿಗೆ ಶೇ .100 ರಷ್ಟು ನಾಗರಿಕರನ್ನು ನಾವು ಸಂಪರ್ಕಿಸಬೇಕು. ಜಲ್ ಜೀವನ್ ಮಿಷನ್‌ನ ಕೇವಲ ಎರಡು ವರ್ಷಗಳಲ್ಲಿ 4.5 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
ಈ ವರ್ಷ ಮೊದಲ ಬಾರಿಗೆ, ಪ್ರಧಾನಮಂತ್ರಿಯವರು ರಾಷ್ಟ್ರ ಧ್ವಜವನ್ನು ಹಾರಿಸಿದ ತಕ್ಷಣ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಪುಷ್ಪವೃಷ್ಟಿಯನ್ನು ಸುರಿಸಿತು. ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ಸುಬೇದಾರ್ ನೀರಜ್ ಚೋಪ್ರಾ, ಸೇರಿದಂತೆ, ಒಲಿಂಪಿಕ್ ವಿಜೇತರು, ಸುಮಾರು 240 ಒಲಿಂಪಿಯನ್‌ಗಳು ಮತ್ತು ಕ್ರೀಡಾ ಅಧಿಕಾರಿಗಳು ಸಹ ಹಾಜರಿದ್ದರು. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಹಾಗೂ ಭಾಗವಹಿಸಿದವರನ್ನು ಪ್ರಧಾನಿ ಅಭಿನಂದಿಸಿದರು.
ಕೋವಿಡ್ -19 ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಕರೋನಾ ಯೋಧರನ್ನು ಗೌರವಿಸಲು, ಕೆಂಪುಕೋಟೆಯ ದಕ್ಷಿಣ ಭಾಗದಲ್ಲಿ ಪ್ರತ್ಯೇಕ ಬ್ಲಾಕ್ ಅನ್ನು ರಚಿಸಲಾಗಿದ್ದು ವಿಶೇಷವಾಗಿತ್ತು. 500 ಎನ್.ಸಿ.ಸಿ ಕೆಡೆಟ್‌ಗಳು ರಾಷ್ಟ್ರಗೀತೆಯನ್ನು ಹಾಡಿದರು.