ನವದೆಹಲಿ, ಆ.10: ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಗುರುವಾರ ಧ್ವನಿ ಮತದಿಂದ ಸೋಲಿಸಲಾಯಿತು. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಬಣ ಐ.ಎನ್.ಡಿ.ಐ.ಎ ವಿರುದ್ಧ ವಾಗ್ದಾಳಿ ನಡೆಸಿ, ಈ ನಿರ್ಣಯದ ಬಗ್ಗೆ ನೀವು ಯಾವ ರೀತಿಯ ಚರ್ಚೆ ಮಾಡಿದ್ದೀರಿ. ಹೆಸರು ಬದಲಾಯಿಸುವ ಮೂಲಕ ಭಾರತವನ್ನು ಆಳಬಹುದು ಎಂದು ಪ್ರತಿಪಕ್ಷಗಳು ಭಾವಿಸಿವೆ. ಕಾಂಗ್ರೆಸ್ ಭಾರತದ ವರ್ಚಸ್ಸನ್ನು ಹಾಳುಮಾಡಲು ಇಷ್ಟಪಟ್ಟಿತು. ಕಾಂಗ್ರೆಸ್ ಗೆ ಭಾರತ ನಿರ್ಮಿತ ಲಸಿಕೆಗಳ ಮೇಲೆ ನಂಬಿಕೆಯಿಲ್ಲ. ಅವರಿಗೆ ಭಾರತದ ಜನರು ಮತ್ತು ಅವರ ಸಾಮರ್ಥ್ಯಗಳಲ್ಲಿ ನಂಬಿಕೆ ಇಲ್ಲ. ಕಾಂಗ್ರೆಸ್ ಬಗ್ಗೆ ಜನರಲ್ಲಿ ಅವಿಶ್ವಾಸದ ಮಟ್ಟ ಹೆಚ್ಚಾಗಿದೆ.
ನೀವು ಬೆಂಗಳೂರಿನಲ್ಲಿ ಯುಪಿಎಗೆ ಅಂತ್ಯಸಂಸ್ಕಾರ ಮಾಡಿರುವ ಬಗ್ಗೆ ನಾನು ಪ್ರತಿಪಕ್ಷಗಳಿಗೆ ನನ್ನ ಸಂತಾಪವನ್ನು ತಿಳಿಸುತ್ತೇನೆ. ನೀವು ಕೂಡ ಸಂಭ್ರಮಿಸುತ್ತಿದ್ದರಿಂದ ನಾನು ತಡವಾಗಿ ಬಂದಿದ್ದೇನೆ ಎಂದು ವಿಪಕ್ಷಗಳನ್ನು ಪ್ರಧಾನಿ ತಮ್ಮ ಮಾತಿನಲ್ಲಿ ಕುಟುಕಿದರು. ಹಳೆಯ ಕಾರನ್ನು ಎಲೆಕ್ಟ್ರಾನಿಕ್ ಕಾರು ಎಂಬುದನ್ನು ತೋರಿಸಲು ಹೊರಟಿದ್ದೀರಿ ಎಂದು ಐ.ಎನ್.ಡಿ.ಐ.ಎ ಕೂಟದ ಬಗ್ಗೆ ವ್ಯಂಗ್ಯವಾಡಿದ ಪ್ರಧಾನಿ, ಹಳೆಯ ಮನೆಗೆ ಬಣ್ಣ ಹಚ್ಚುತ್ತಿದ್ದೀರಿ, ಪ್ಲಾಸ್ಟರ್ ಹಾಕುತ್ತಿದ್ದೀರಿ ಎಂದು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ದೇಶದ ಅಭಿವೃದ್ಧಿಗೆ ಸಂಬಂಧಿಸಿದ ಹಲವಾರು ಮಸೂದೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡದಿದ್ದಕ್ಕಾಗಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ವಿಪಕ್ಷಗಳು ‘ದೇಶಕ್ಕಿಂತ ‘ದಲ್’ (ಪಕ್ಷ) ದೊಡ್ಡದು ಎಂದು ತೋರಿಸಿದ್ದಾರೆ ಎಂದರು. ಜಾಗತಿಕ ಮಟ್ಟದಲ್ಲಿ ಭಾರತದ ಬಗ್ಗೆ ವಿಶ್ವಾಸ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ವಿಪಕ್ಷಗಳಿಗೆ ಅವಿಶ್ವಾಸ ಮೂಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.