ಲಕ್ನೋ: ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ಭವ್ಯ ಯೋಜನೆ ಕಾರ್ಯಗತವಾಗಲು ಶ್ರಮಿಸಿದ ಪ್ರತಿಯೊಬ್ಬ ಕಾರ್ಮಿಕರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ.
ಕೋವಿಡ್ ಸಮಯದಲ್ಲಿಯೂ ಕೂಡ ಇಲ್ಲಿಯ ಕೆಲಸ ನಿಲ್ಲಲಿಲ್ಲ. ವಾರಣಾಸಿಯ ಕೇಂದ್ರ ಭಾಗದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಈ ಯೋಜನೆಯಿಂದಾಗಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ.
ಕಾಶಿ ವಿಶ್ವನಾಥ ಧಾಮವು ಕೇವಲ ಭವ್ಯವಾದ ಕಟ್ಟಡವಲ್ಲ ಆದರೆ ನಮ್ಮ ಸನಾತನ ಸಂಸ್ಕೃತಿ ಮತ್ತು ನಮ್ಮ ಆಧ್ಯಾತ್ಮಿಕ ಆತ್ಮದ ಸಂಕೇತವಾಗಿದೆ. ಇದು ಭಾರತದ ಪ್ರಾಚೀನತೆ, ಸಂಪ್ರದಾಯಗಳು, ಶಕ್ತಿ ಮತ್ತು ಕ್ರಿಯಾಶೀಲತೆಯ ಸಂಕೇತವಾಗಿದೆ.
ಕಾಶಿ ವಿಶ್ವನಾಥ ದೇವಾಲಯದ ಆವರಣವು ಮೊದಲು ಕೇವಲ 3000 ಚದರ ಅಡಿ ಪ್ರದೇಶದಲ್ಲಿ ಹರಡಿತ್ತು. ಆದರೆ ಈಗ ಅದನ್ನು 5 ಲಕ್ಷ ಚದರ ಅಡಿಗೆ ವಿಸ್ತರಿಸಲಾಗಿದೆ. ಇದರಿಂದ ವಿಶೇಷಚೇತನರು ಮತ್ತು ಹಿರಿಯ ನಾಗರಿಕರಿಗೆ ತೀರ್ಥಯಾತ್ರೆಯನ್ನು ಸುಲಭಗೊಳಿಸುತ್ತದೆ ಎಂದು ಅವರು ಹೇಳಿದರು.
ಕಾಶಿ ಹಿಂದೆ ಕ್ರೂರತೆಯನ್ನು ಕಂಡಿದೆ ಆದರೆ ಅದು ಉಳಿದುಕೊಂಡು ತನ್ನನ್ನು ತಾನೇ ಪುನರುಜ್ಜೀವನಗೊಳಿಸಿದೆ. ಭಾರತವು ತನ್ನ ದಾರಿಯಲ್ಲಿ ಬರುವ ಯಾವುದೇ ಸವಾಲನ್ನು ಎದುರಿಸಲು ತನ್ನ ಶಕ್ತಿಯನ್ನು ಮತ್ತೆ ಮತ್ತೆ ಪ್ರದರ್ಶಿಸಿದೆ ಎಂದು ಅವರು ಹೇಳಿದರು. ಶಿವಾಜಿ ಮತ್ತು ಮಹಾರಾಜ ಸುಹೇಲ್‌ದೇವ್ ಅವರನ್ನು ಪ್ರಧಾನಿ ಸ್ಮರಿಸಿದರು.
ಕಾಶಿಯ ದರ್ಶನದಿಂದ ಸಕಲ ಸಂಕಷ್ಟ ದೂರವಾಗುತ್ತದೆ. ಕಾಶಿ ನಮ್ಮ ಆದ್ಯಾತ್ಮಿಕತೆಯ ಪ್ರತೀಕವಾಗಿದೆ. ಈ ಪರಿಸರದಲ್ಲಿ ದೈವಿಕ ವಾತಾವರಣದೆ. ಪ್ರಾಚಿನ ಕಾಶಿಗೆ ಆಧುನಿಕ ಸ್ಪರ್ಶ ಸಿಕ್ಕಿದೆ. ಇಂದು ಶಿವನ ಪ್ರಿಯ ವಾರವಾಗಿದ್ದು, ಇಂದೇ ಕಾರಿಡಾರ್ ಲೋಕಾರ್ಪಣೆಗೊಂಡಿದೆ. ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು ಎಂದರು.
ಇದಕ್ಕೂ ಮುನ್ನ ಕಾಶಿಯ ಕಾವಲುಗಾರ ಎಂದು ಕರೆಯಲ್ಪಡುವ ಕಾಲ ಭೈರವ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಧಾನಿ ವಾರಣಾಸಿಗೆ ತಮ್ಮ ಭೇಟಿಯನ್ನು ಪ್ರಾರಂಭಿಸಿದರು.
ಪೂಜೆ ಬಳಿಕ ಅಲಕಾನಂದ ಕ್ರೂಸ್‍ನಲ್ಲಿ ಲಲಿತಾ ಘಾಟ್‍ಗೆ ತೆರಳಿ ಅಲ್ಲಿ ಕಾವಿಧಾರಿಯಾಗಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಅಲ್ಲಿ ಅಘ್ರ್ಯ ಅರ್ಪಿಸಿ ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡಿದರು. ಪವಿತ್ರ ಗಂಗಾಜಲವನ್ನು ಹೊತ್ತು ಕಾಶಿ ವಿಶ್ವನಾಥ ಧಾಮಕ್ಕೆ ಪ್ರಧಾನಿ ತಲುಪಿದರು.
ಕಾರಿಡಾರ್ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೋಜನ ಸವಿದರು.