ಲೆಪ್ಚಾ (ಹಿಮಾಚಲ ಪ್ರದೇಶ), ನ.12: ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಭಾರತೀಯ ಸೇನಾ ಯೋಧರೊಂದಿಗೆ ದೀಪಾವಳಿ ಆಚರಿಸಿದರು. ಗಡಿಯಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಗೆ ಪ್ರಧಾನಿ ಮೋದಿ ಶುಭ ಹಾರೈಸಿದರು. ಪ್ರತಿ ವರ್ಷ ಪ್ರಧಾನಿ ಮೋದಿ ಅವರು ಭದ್ರತಾ ಸಿಬ್ಬಂದಿಗಳೊಂದಿಗೆ ದೀಪಾವಳಿ ಆಚರಿಸುತ್ತಾರೆ. ಲೆಪ್ಚಾದಲ್ಲಿ ಸೈನಿಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ನಾನು ಪ್ರತಿ ವರ್ಷ ನಮ್ಮ ಸೇನಾ ಸಿಬ್ಬಂದಿಯೊಂದಿಗೆ ದೀಪಾವಳಿಯನ್ನು ಆಚರಿಸಲು ಬರುತ್ತೇನೆ.
ಅಯೋಧ್ಯೆಯು ಭಗವಾನ್ ರಾಮನಿರುವ ಸ್ಥಳ ಎಂದು ಹೇಳಲಾಗುತ್ತದೆ, ಆದರೆ ನನಗೆ ಭಾರತೀಯ ಸೇನೆಯ ಸಿಬ್ಬಂದಿ ಇರುವಲ್ಲಿ ಅಯೋಧ್ಯೆ. ನೀವು ಇರುವಲ್ಲಿಯೇ ಹಬ್ಬ. ಪ್ರಧಾನಿ, ಮುಖ್ಯಮಂತ್ರಿ ಆಗುವ ಮೊದಲಿನಿಂದಲೂ ದೀಪಾವಳಿ ಸಂದರ್ಭದಲ್ಲಿ ಗಡಿ ಪ್ರದೇಶಗಳಿಗೆ ತೆರಳಿ ಭದ್ರತಾ ಪಡೆಗಳೊಂದಿಗೆ ದೀಪಾವಳಿಯ ಸಂಭ್ರಮಾಚರಣೆ ನಡೆಸುತ್ತಿದ್ದೆ ಎಂದು ಅವರು ಹೇಳಿದರು.
ದೇಶದ ಪ್ರತಿಯೊಂದು ಮನೆಯಲ್ಲೂ ನಮ್ಮ ಗಡಿ ಕಾಯುವ ಎಲ್ಲ ಸೈನಿಕರಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಕುಟುಂಬ ಇರುವಲ್ಲಿ ಮಾತ್ರ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಇಂದು, ನೀವು ನಿಮ್ಮ ಕುಟುಂಬದಿಂದ ದೂರವಿರುವಾಗ ನೀವೆಲ್ಲರೂ ಗಡಿಗಳಲ್ಲಿ ನೆಲೆಸಿದ್ದೀರಿ, ಇದು ನಿಮ್ಮ ಕರ್ತವ್ಯದ ಶ್ರದ್ಧೆಯ ಪರಾಕಾಷ್ಠೆಯನ್ನು ತೋರಿಸುತ್ತದೆ ಎಂದು ಪ್ರಧಾನಿ ಹೇಳಿದರು.