ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿಯ ಬಡವರ ಪರ ಮತ್ತು ಸಕ್ರಿಯ ಆಡಳಿತಕ್ಕೆ ಅನುಮೋದನೆಯ ಮುದ್ರೆ ಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಸಂಜೆ ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉತ್ತರ ಪ್ರದೇಶ, ಗೋವಾ ಮತ್ತು ಮಣಿಪುರದಲ್ಲಿ ಸರ್ಕಾರವಿದ್ದರೂ ಬಿಜೆಪಿಯ ಮತ ಹಂಚಿಕೆ ಹೆಚ್ಚಾಗಿದೆ. ಗೋವಾದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ಹತ್ತು ವರ್ಷ ಅಧಿಕಾರದಲ್ಲಿದ್ದರೂ ರಾಜ್ಯದಲ್ಲಿ ಬಿಜೆಪಿ ಸ್ಥಾನಗಳ ಸಂಖ್ಯೆ ಹೆಚ್ಚಿದೆ. ಉತ್ತರಾಖಂಡದಲ್ಲೂ ಬಿಜೆಪಿ ಇತಿಹಾಸ ಸೃಷ್ಟಿಸಿದೆ ಎಂದರು. ಉತ್ತರ ಪ್ರದೇಶ ದೇಶಕ್ಕೆ ಹಲವು ಪ್ರಧಾನಿಗಳನ್ನು ನೀಡಿದೆ. ಆದರೆ ಐದು ವರ್ಷಗಳ ಅವಧಿ ಪೂರೈಸಿದ ಮುಖ್ಯಮಂತ್ರಿಯೊಬ್ಬರು ಮರು ಆಯ್ಕೆಯಾಗಿರುವುದು ಇದೇ ಮೊದಲ ನಿದರ್ಶನ ಎಂದು ಪ್ರಧಾನಿ ಹೇಳಿದರು.
37 ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಯಾವುದೇ ಸರ್ಕಾರ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿಲ್ಲ, ಈ ಬಾರಿ ಇತಿಹಾಸ ನಿರ್ಮಾಣವಾಗಿದೆ ಎಂದು ಅವರು ಹೇಳಿದರು. ವರ್ಷಗಳಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆ ಸುಧಾರಿಸಿದೆ, ಮಾತ್ರವಲ್ಲದೆ ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನಮ್ಮ ತಾಯಂದಿರು ಮತ್ತು ಸಹೋದರಿಯರು, ಯುವಕರು ಭಾರತೀಯ ಜನತಾ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇದೊಂದು ದೊಡ್ಡ ಸಂದೇಶವಾಗಿದೆ ಎಂದು ಪ್ರಧಾನಿ ಹೇಳಿದರು. ಮೊದಲ ಬಾರಿ ಮತದಾನ ಮಾಡಿದವರು ಅತ್ಯುತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡು ಬಿಜೆಪಿಯ ಗೆಲುವಿಗೆ ಕಾರಣರಾಗಿದ್ದಾರೆ. ಇಂದು ಸಂಭ್ರಮದ ದಿನವಾಗಿದೆ ಎಂದು ಪ್ರಧಾನಿ ತಮ್ಮ ಮಾತಿನಲ್ಲಿ ಉಲ್ಲೇಖಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಧಾನಸಭಾ ಚುನಾವಣೆಯ ವಿಜಯಕ್ಕಾಗಿ ಅಭಿನಂದಿಸಿ ಸನ್ಮಾನಿಸಿದರು.