ನವದೆಹಲಿ: ನೂರು ಕೋಟಿ ಡೋಸ್ ಲಸಿಕೆಯಿಂದ ದೇಶದ ಸಾಮರ್ಥ್ಯ ಅನಾವರಣಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇಂದು ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಅಕ್ಟೋಬರ್ 21ರಂದು ದೇಶದಲ್ಲಿ ನೂರು ಕೋಟಿ ಕೊರೊನಾ ಲಸಿಕೆಯ ಡೋಸ್ ನೀಡಲಾಗಿದೆ. ಈ ಬೃಹತ್ ಸಾಧನೆಯ ಹಿಂದೆ ಪ್ರತಿಯೊಬ್ಬ ದೇಶವಾಸಿಯ ಅನನ್ಯ ಕೊಡುಗೆ ಇದೆ. ದೇಶವಾಸಿಗಳಿಗೆ ಮೊದಲ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಪ್ರಧಾನಿ, ನೂರು ಕೋಟಿ ಲಸಿಕೆ ಡೋಸ್ ಬರೀ ಸಂಖ್ಯೆಯಲ್ಲ, ದೇಶದ ಇತಿಹಾಸದಲ್ಲಿ ಇದು ನೂತನ ಅಧ್ಯಾಯದ ಆರಂಭ.
ಒಗ್ಗಟ್ಟಿನ ಪ್ರಯತ್ನದಿಂದ ದೇಶ ಯಾವ ರೀತಿ ಅತ್ಯಂತ ಕಠಿಣ ಸವಾಲನ್ನು ಕಡಿಮೆ ಅವಧಿಯಲ್ಲಿ ಯಶಸ್ವಿಯಾಗಿ ಎದುರಿಸಿದೆ ಎಂದು ಜಗತ್ತಿಗೆ ಪರಿಚಯವಾಗಿದೆ. ಗುರಿ ಸಾಧನೆಯತ್ತ ದೇಶವು ಎಷ್ಟು ಪರಿಣಾಮಕಾರಿಯಾಗಿ ತೊಡಗಿಸಿಕೊಂಡಿದೆ ಎಂಬುದಕ್ಕೆ ಇದೊಂದು ಉತ್ತಮವಾದ ಉದಾಹರಣೆ.
ನಮ್ಮ ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಆತಂಕ ಇತ್ತು. ಆದರೆ ಎಲ್ಲದಕ್ಕೂ ನಮ್ಮ ವಿಜ್ಞಾನಿಗಳು ವೈಜ್ಞಾನಿಕ ಆಧಾರದಲ್ಲೇ ಉತ್ತರ ನೀಡಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳು, ಕೊರೊನಾ ಮುಂಚೂಣಿ ಕಾರ್ಯಕರ್ತರ ಶ್ರಮ, ಶ್ರದ್ಧಾಪೂರ್ವಕ ಕರ್ತವ್ಯದಿಂದ ಭಾರತ ಕೊರೊನಾವನ್ನು ನಿಯಂತ್ರಣದಲ್ಲಿಟ್ಟಿದೆ.
ನಮ್ಮ ಲಸಿಕಾಕರಣವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್’ ಗೆ ಜ್ವಲಂತ ಉದಾಹರಣೆ. ವಿಐಪಿ ಸಂಸ್ಕೃತಿಯ ನೆರಳು ಲಸಿಕಾಕರಣದ ಮೇಲೆ ಬೀಳದ ಹಾಗೆ ಲಸಿಕಾ ಅಭಿಯಾನ ನಡೆದಿರುವುದು ಶ್ಲಾಘನೀಯ. ಎಲ್ಲರೂ ಸಮಾನರು ಎಂಬ ದೃಷ್ಟಿಯಲ್ಲಿ ಲಸಿಕಾಕರಣ ನಡೆದಿದೆ. ಇಡೀ ಲಸಿಕಾ ಅಭಿಯಾನವು ವೈಜ್ಞಾನಿಕ ಆಧಾರದಲ್ಲೇ ನಡೆದಿರುವುದು ಪ್ರತಿಯೊಬ್ಬರೂ ಹೆಮ್ಮೆ ಪಡುವ ಸಂಗತಿಯಾಗಿದೆ.
ಭಾರತದ ಆರ್ಥಿಕತೆಯ ಬಗ್ಗೆ ಇಲ್ಲಿರುವ ಹಾಗೂ ವಿದೇಶದ ತಜ್ಞರು ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ. ಇಂದು ದಾಖಲೆ ಪ್ರಮಾಣದಲ್ಲಿ ಹೂಡಿಕೆ ಭಾರತೀಯ ಕಂಪನಿಗಳಿಗೆ ಹರಿದು ಬರುತ್ತಿರುವುದು ಮಾತ್ರವಲ್ಲದೇ ಯುವಜನರಿಗೆ ಹೊಸ ಹೊಸ ಉದ್ಯೋಗ ಸೃಷ್ಟಿಯಾಗುತ್ತಿದೆ.
ಈ ಹಿಂದೆ ಯಾವುದೇ ವಸ್ತುವಿನ ಹಿಂದೆ ಬೇರೆ ದೇಶಗಳ ಹೆಸರು ಪ್ರತಿಧ್ವನಿಸುತ್ತಿತ್ತು. ಆದರೆ ಈಗ ಬಹುತೇಕ ವಸ್ತುಗಳು ಮೇಡ್ ಇನ್ ಇಂಡಿಯಾ ಎಂದು ಹೇಳಲು ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಾರೆ. ಇಂದು ಮೇಡ್ ಇನ್ ಇಂಡಿಯಾ ಎಂಬ ಮಂತ್ರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಮುಂದಿನ ದಿನಗಳಲ್ಲಿ ಹಬ್ಬಗಳ ಸಂದರ್ಭದಲ್ಲಿ ಕೊರೊನಾಗೆ ಕಡಿವಾಣ ಹಾಕುವ ದೃಷ್ಟಿಯಿಂದ ಪ್ರತಿಯೊಬ್ಬರೂ ಪ್ರಜ್ಞಾವಂತ ನಾಗರಿಕರ ಹಾಗೆ ವರ್ತಿಸಬೇಕು. ಕಳೆದ ಬಾರಿ ಮಾಡಿದ ತಪ್ಪು ಈ ಬಾರಿ ಮಾಡಬಾರದು. ಮೈ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಇಲ್ಲಿಯವರೆಗೆ ಲಸಿಕೆ ಪಡೆಯದವರನ್ನು ಲಸಿಕೆ ಪಡೆದವರು ಮನವೊಲಿಸಿ ಲಸಿಕೆ ಹಾಕಿಸಿಕೊಳ್ಳಲು ನೆರವಾಗಬೇಕು.
ಹಬ್ಬದ ಸಂದರ್ಭದಲ್ಲಿ ‘ವೋಕಲ್ ಫಾರ್ ಲೋಕಲ್’ ಪರಿಕಲ್ಪನೆ ಸಾಕಾರಗೊಳಿಸಲು ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕು. ಸ್ಥಳೀಯ ವ್ಯಾಪಾರಿಗಳ ಬಳಿ ವ್ಯವಹಾರ ಮಾಡುವ ಮೂಲಕ ಗ್ರಾಮೀಣ ಪ್ರದೇಶಗಳ ಕುಶಲಕರ್ಮಿಗಳಿಗೆ, ಸ್ಥಳೀಯ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ಆಗುವಂತೆ ವಾತಾವರಣ ನಿರ್ಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.