ಒಂದೇ ದಿನದಲ್ಲಿ 86 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುವ ಮೂಲಕ ಭಾರತ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾನುವಾರ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜೂನ್ 21 ರಂದು ಜನರ ಸಹಕಾರದಿಂದ ದೇಶ ಈ ಸಾಧನೆ ಮಾಡಿದೆ.
ಲಸಿಕೆಯಿಂದ ಸಿಗುವ ಸುರಕ್ಷತೆಯನ್ನು ಪ್ರತಿಯೊಬ್ಬ ವ್ಯಕ್ತಿಯೂ ಪಡೆಯಬೇಕು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಲಸಿಕೆ ಸ್ವೀಕರಿಸಲು ಇರುವ ಹಿಂಜರಿಕೆಯನ್ನು ಕೊನೆಗೊಳಿಸಲು ಜನರನ್ನು ಪ್ರೋತ್ಸಾಹಿಸುವ ಕೆಲಸಗಳು ಆಗಬೇಕು. ಲಸಿಕೆ ಹಿಂಜರಿಕೆಯನ್ನು ಕೊನೆಗೊಳಿಸುವ ಸಲುವಾಗಿ ದೇಶಾದ್ಯಂತ ಸಂಸ್ಥೆಗಳು ಮುಂದೆ ಬಂದಿದ್ದು ಜನರ ಭೀತಿ ನಿವಾರಿಸುವ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿವೆ ಎಂದು ಹೇಳಿದರು.
ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ದುಲಾರಿಯಾ ಗ್ರಾಮದ ಕೆಲವು ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಲಸಿಕೆ ಬಗ್ಗೆ ಅವರಲ್ಲಿದ್ದ ಅನುಮಾನಗಳನ್ನು ನಿವಾರಿಸಿದರು. ಕೊರೊನಾ ಅವಧಿಯಲ್ಲಿ ವೈದ್ಯರ ಹಾಗೂ ಇತರೆ ಕೊರೊನಾ ಸೇನಾನಿಗಳ ಸೇವೆಗಳನ್ನು ಪ್ರಧಾನಿ ಮೋದಿ ಸ್ಮರಿಸಿದರು.