ಬಿನಾ (ಮ.ಪ್ರ), ಸೆ. 15: ಸನಾತನ ಧರ್ಮ, ಸಂಸ್ಕೃತಿಯನ್ನು ದುರ್ಬಲಗೊಳಿಸಲು ಮತ್ತು ನಿರ್ಮೂಲನೆ ಮಾಡಲು ಇಂಡಿ (ಐ.ಎನ್.ಡಿ.ಐ) ಮೈತ್ರಿಕೂಟವು ಗುಪ್ತ ಕಾರ್ಯಸೂಚಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಮಧ್ಯಪ್ರದೇಶದ ಬಿನಾದಲ್ಲಿ ‘ಪೆಟ್ರೋಕೆಮಿಕಲ್ ಕಾಂಪ್ಲೆಕ್ಸ್’ ಮತ್ತು ಮಧ್ಯಪ್ರದೇಶದ ಸುತ್ತಮುತ್ತಲಿನ ಹತ್ತು ಪ್ರಮುಖ ಕೈಗಾರಿಕಾ ಯೋಜನೆಗಳು ಸೇರಿದಂತೆ ಒಟ್ಟು 50,700 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ಅನೇಕ ಯೋಜನೆಗಳಿಗೆ ಅಡಿಪಾಯ ಹಾಕಿದ ನಂತರ ಬೃಹತ್ ಜನಸಮೂಹವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟಲ್ ಇನ್ಕ್ಲೂಸಿವ್ ಅಲೈಯನ್ಸ್ (ಐ.ಎನ್.ಡಿ.ಐ.ಎ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ನಾಯಕನನ್ನು ಹೊಂದಿರದ ಮೈತ್ರಿ ಎಂದರು. ಇತ್ತೀಚಿನ ದಿನಗಳಲ್ಲಿ ಸನಾತನ ಧರ್ಮದ ವಿರುದ್ಧ ಬಹಿರಂಗವಾಗಿ ಮಾತನಾಡಲು ಆರಂಭಿಸಿದ್ದಾರೆ. ದೇಶಾಸ್ಯಂತ ಸನಾತನ ಧರ್ಮದ ಅನುಯಾಯಿಗಳು ಎಚ್ಚರದಿಂದ ಇರಬೇಕು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ನಮ್ಮ ವಿರುದ್ಧ ಇದೇ ರೀತಿಯ ದಾಳಿಯನ್ನು ನಡೆಸುವ ಸಾಧ್ಯತೆಯಿದೆ. ಇಂತಹ ವ್ಯಕ್ತಿಗಳ ಕೈಯಲ್ಲಿ ಅಧಿಕಾರ ನೀಡಿದರೆ ಈ ದೇಶವನ್ನು ಮತ್ತೆ 1000 ವರ್ಷಗಳ ಗುಲಾಮಗಿರಿಗೆ ತಳ್ಳಿ ಬಿಡುತ್ತಾರೆ ಎಂದು ವಿಪಕ್ಷ ಒಕ್ಕೂಟಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಜಾಗತಿಕ ವೇದಿಕೆಗಳಲ್ಲಿ ಭಾರತವು ವಿಶ್ವ ನಾಯಕನಾಗಿ ಹೊರಹೊಮ್ಮುತ್ತಿರುವ ಸಮಯದಲ್ಲಿ, ಕೆಲವು ಪಕ್ಷಗಳು ದೇಶ ಮತ್ತು ಅದರ ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿವೆ. ಈ ಜನರು ಒಗ್ಗೂಡಿ ‘ಇಂಡಿ’ ಮೈತ್ರಿಕೂಟವನ್ನು ರಚಿಸಿದರು. ಕೆಲವರು ಇದನ್ನು ದುರಹಂಕಾರಿ ಮೈತ್ರಿ ಎಂದು ಕರೆಯುತ್ತಿದ್ದಾರೆ. ಅವರಿಗೆ ಇನ್ನೂ ನಾಯಕನಿಲ್ಲ ಮತ್ತು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಅವರನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಅವರಿಗೂ ಗೊತ್ತಿಲ್ಲ. ಅವರು ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡುವ ಗುಪ್ತ ಕಾರ್ಯಸೂಚಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರತಿಪಕ್ಷ ಬಣವು ತನ್ನ ಮೂರನೇ ಸಭೆಯಲ್ಲಿ ದೇಶದಲ್ಲಿ ಸನಾತನ ಸಂಸ್ಕೃತಿಯನ್ನು ಕೊನೆಗೊಳಿಸುವ ನಿರ್ಣಯವನ್ನು ಅಂಗೀಕರಿಸಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಈ ಇಂಡಿ-ಮೈತ್ರಿಕೂಟವು ನಮ್ಮ ಸನಾತನ’ ಸಂಸ್ಕೃತಿಯನ್ನು ಕೊನೆಗೊಳಿಸುವ ನಿರ್ಣಯವನ್ನು ಅಂಗೀಕರಿಸಿತು. ಶತಮಾನಗಳಿಂದ ದೇಶ ಮತ್ತು ನಮ್ಮ ಜನರನ್ನು ಒಟ್ಟಿಗೆ ಇರಿಸಿರುವ ಸಿದ್ಧಾಂತಗಳು, ಸಂಸ್ಕೃತಿಗಳು ಮತ್ತು ಸಂಪ್ರದಾಯಗಳನ್ನು ನಾಶಪಡಿಸಲು ಅವರು ಬದ್ದರಾಗಿದ್ದಾರೆ ಎಂದು ಪ್ರಧಾನಿ ಹೇಳಿದರು.