ವಯನಾಡ್, ಆ. 26: ಕಣಿವೆಗೆ ಉರುಳಿದ ಪರಿಣಾಮ ಜೀಪ್ ನಲ್ಲಿದ್ದ 9 ಮಂದಿ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡ ಘಟನೆ ಕೇರಳದ ವಯನಾಡ್ ಜಿಲ್ಲೆಯ ಥಲಪ್ಪುಜದಲ್ಲಿ ಶುಕ್ರವಾರ ಸಂಭವಿಸಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ತಾಯಿ ಮಗಳು ಕೂಡ ಸೇರಿದ್ದಾರೆ.
ಜೀಪ್ ನಲ್ಲಿ ಚಾಲಕ ಸೇರಿದಂತೆ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು. ಅದರಲ್ಲಿ 13 ಮಹಿಳೆಯರು ಎಂದು ಕೇರಳ ಅರಣ್ಯ ಸಚಿವ ಎ.ಕೆ. ಸಸೀಂದ್ರನ್ ಹೇಳಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಅವರು ಘಟನೆ ಆಘಾತವನ್ನುಂಟುಮಾಡಿದೆ. ಜಿಲ್ಲಾಧಿಕಾರಿಯವರ ವರದಿಯ ಅನುಗುಣವಾಗಿ ಪರಿಹಾರ ಮೊತ್ತವನ್ನು ನಿರ್ಧರಿಸಲಾಗುವುದು ಎಂದು ಸಚಿವರು ಹೇಳಿದರು. ಜೀಪ್ ಚಾಲಕ ಮಾಣಿಯ ಹೇಳಿಕೆಯನ್ನು ಕೇರಳ ಪೊಲೀಸರು ಪಡೆದಿದ್ದಾರೆ. ಚಾಲಕನ ಪ್ರಕಾರ, ಬ್ರೇಕ್ ಫೈಲ್ಯರ್ ಆದ ಕಾರಣ ಜೀಪ್ ನಿಯಂತ್ರಣಕ್ಕೆ ಸಿಗಲಿಲ್ಲ ಎನ್ನಲಾಗಿದೆ. ಗಾಯಗೊಂಡ ಚಾಲಕನನ್ನು ಮನಂತವಾಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ: ಶುಕ್ರವಾರ ಅಪರಾಹ್ನ 3.30 ಗಂಟೆಗೆ ವಯನಾಡ್ ಜಿಲ್ಲೆಯ ಥಲಪ್ಪುಜದ ಬಳಿಯ ಕನೋತ್ಮಾಲಾ ಎಂಬಲ್ಲಿ ಎಸ್ಟೇಟ್ ನಿಂದ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ, ಚಾಲಕನ ನಿಯಂತ್ರಣ ತಪ್ಪಿದ ಜೀಪ್ ಸುಮಾರು 25 ಮೀಟರ್ ಆಳಕ್ಕೆ ಉರುಳಿ ಬಿತ್ತು. ಅವಘಡದ ಭೀಕರತೆಗೆ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿ ಎರಡು ಭಾಗವಾಗಿದೆ.