ಮುಂಬೈ, ಜು. 2: ವಿರೋಧ ಪಕ್ಷದ ನಾಯಕರೊಬ್ಬರು ಆಡಳಿತ ಸರ್ಕಾರವನ್ನು ಬೆಂಬಲಿಸಿ ಅದರ ಭಾಗವಾಗಿದ್ದಾರೆ. ಹೌದು, ಅಚ್ಚರಿಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸಮ್ಮುಖದಲ್ಲಿ ಎನ್.ಸಿ.ಪಿ ನಾಯಕ ಅಜಿತ್ ಪವಾರ್ ಮಹಾರಾಷ್ಟ್ರ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಎನ್ಸಿಪಿಯ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಯಲು ಬಯಸುವುದಾಗಿ ಘೋಷಿಸಿದ್ದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎನ್.ಸಿ.ಪಿ ನಾಯಕ ಶರದ್ ಪವಾರ್ ಆಡಳಿತಾರೂಢ ಎನ್.ಡಿ.ಎ ಮಿತ್ರಕೂಟ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ವಿರೋಧ ಪಕ್ಷಗಳ ರಂಗವನ್ನು ಬಲಪಡಿಸುವಲ್ಲಿ ನೇತೃತ್ವ ವಹಿಸಿಕೊಂಡ ಬೆನ್ನಲ್ಲೇ, ಅವರ ಪಕ್ಷದ ಹಿರಿಯ ನಾಯಕ ಹಾಗೂ ಸಂಬಂಧಿ ಅಜಿತ್ ಪವಾರ್ ಮಹಾರಾಷ್ಟ್ರದಲ್ಲಿ ಎನ್.ಡಿ.ಎ. ಸರ್ಕಾರದ ಭಾಗವಾಗಿದ್ದು ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಉಂಟುಮಾಡಿದೆ.