Monday, January 20, 2025
Monday, January 20, 2025

ಜಾಮ್‌ನಗರದಲ್ಲಿ ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ

ಜಾಮ್‌ನಗರದಲ್ಲಿ ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ

Date:

ಜಾಮ್ನಗರ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾಮ್‌ನಗರದಲ್ಲಿ ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರ (ಜಿಸಿಟಿಎಂ) ಕ್ಕೆ ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಅವರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

ಜಿಸಿಟಿಎಂ ಸಾಂಪ್ರದಾಯಿಕ ಔಷಧಕ್ಕಾಗಿ ವಿಶ್ವದ ಮೊದಲ ಮತ್ತು ಏಕೈಕ ಜಾಗತಿಕ ಕೇಂದ್ರವಾಗಿದೆ. ಇದು ಜಾಗತಿಕ ಸ್ವಾಸ್ಥ್ಯದ ಅಂತಾರಾಷ್ಟ್ರೀಯ ಕೇಂದ್ರವಾಗಿ ಹೊರಹೊಮ್ಮಲಿದೆ.

ಬಾಂಗ್ಲಾದೇಶ, ಭೂತಾನ್, ನೇಪಾಳದ ಪ್ರಧಾನ ಮಂತ್ರಿಗಳು ಮತ್ತು ಮಾಲ್ಡೀವ್ಸ್ ಅಧ್ಯಕ್ಷರ ವೀಡಿಯೊ ಸಂದೇಶಗಳನ್ನು ಈ ಸಂದರ್ಭದಲ್ಲಿ ಬಿತ್ತರಿಸಲಾಯಿತು.

ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ, ಸಬಾನಂದ ಸೋನೋವಾಲ್, ಮುಂಜಾಪರಾ ಮಹೇಂದ್ರಭಾಯಿ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಉಪಸ್ಥಿತರಿದ್ದರು.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಜಾಮ್‌ನಗರದಲ್ಲಿ ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರ ಸ್ಥಾಪನೆಗೆ ಎಲ್ಲಾ ನೆರವು ನೀಡಿದ ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.

107 ಡಬ್ಲ್ಯುಎಚ್‌ಒ ಸದಸ್ಯ ರಾಷ್ಟ್ರಗಳು ತಮ್ಮ ದೇಶದ ನಿರ್ದಿಷ್ಟ ಸರ್ಕಾರಿ ಕಚೇರಿಗಳನ್ನು ಹೊಂದಿವೆ, ಅಂದರೆ ಸಾಂಪ್ರದಾಯಿಕ ಔಷಧದಲ್ಲಿ ಅದರ ನಾಯಕತ್ವಕ್ಕಾಗಿ ಜಗತ್ತು ಭಾರತಕ್ಕೆ ಬರುತ್ತದೆ.

ಆದ್ದರಿಂದ ಈ ಕೇಂದ್ರವು ನಿಜವಾದ ಜಾಗತಿಕ ಯೋಜನೆಯಾಗಿದೆ ಎಂದು ಅವರು ಹೇಳಿದರು.

ಸಾಂಪ್ರದಾಯಿಕ ಔಷಧಿಗಳ ಉತ್ಪನ್ನಗಳು ಜಾಗತಿಕವಾಗಿ ವಿಪುಲವಾಗಿವೆ ಮತ್ತು ಸಾಂಪ್ರದಾಯಿಕ ಔಷಧದ ಭರವಸೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಕೇಂದ್ರವು ಬಹಳ ದೂರ ಸಾಗಲಿದೆ ಎಂದು ಅವರು ಹೇಳಿದರು.

ಪ್ರಪಂಚದ ಅನೇಕ ಭಾಗಗಳಲ್ಲಿ ಸಾಂಪ್ರದಾಯಿಕ ಔಷಧವು ಚಿಕಿತ್ಸೆಯ ಮೊದಲ ಮಾರ್ಗವಾಗಿದೆ. ಹೊಸ ಕೇಂದ್ರವು ಡೇಟಾ, ನಾವೀನ್ಯತೆ ಮತ್ತು ಸುಸ್ಥಿರತೆಯ ಬಗ್ಗೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಸಾಂಪ್ರದಾಯಿಕ ಔಷಧದ ಬಳಕೆಯನ್ನು ಉತ್ತಮಗೊಳಿಸುತ್ತದೆ ಎಂದು ಅವರು ಹೇಳಿದರು.

ಸಂಶೋಧನೆ ಮತ್ತು ನಾಯಕತ್ವ, ಪುರಾವೆ ಮತ್ತು ಕಲಿಕೆ, ಡೇಟಾ ಮತ್ತು ವಿಶ್ಲೇಷಣೆ, ಸುಸ್ಥಿರತೆ ಮತ್ತು ಸಮಾನತೆ ಹಾಗೂ ನಾವೀನ್ಯತೆ ಮತ್ತು ತಂತ್ರಜ್ಞಾನವು ಈ ಕೇಂದ್ರದ ಐದು ಪ್ರಮುಖ ಕ್ಷೇತ್ರಗಳಾಗಿವೆ ಎಂದು ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಹೇಳಿದರು.

ಮಾರಿಷಸ್‌ನ ಪ್ರಧಾನಮಂತ್ರಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ಈ ಸಂದರ್ಭಕ್ಕೆ ಮಾರಿಷಸ್ ಭಾಗಿಯಾಗಲು ಅವಕಾಶ ಕಲ್ಪಿಸಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದಗಳನ್ನು ಹೇಳಿದರು.

ವಿವಿಧ ಸಂಸ್ಕೃತಿಗಳಲ್ಲಿ ದೇಶೀಯ ವೈದ್ಯಕೀಯ ಪದ್ಧತಿ ಮತ್ತು ಗಿಡಮೂಲಿಕೆ ಉತ್ಪನ್ನಗಳ ಪ್ರಾಮುಖ್ಯತೆಯ ಬಗ್ಗೆ ಅವರು ಒತ್ತಿ ಹೇಳಿದರು.

ಕೇಂದ್ರ ಸ್ಥಾಪನೆಗೆ ಇದಕ್ಕಿಂತ ಹೆಚ್ಚು ಸೂಕ್ತ ಸಮಯ ಇರಲಾರದು ಎಂದು ಅವರು ಹೇಳಿದರು.

ಕೇಂದ್ರದ ಸ್ಥಾಪನೆಯಲ್ಲಿ ನಾಯಕತ್ವ ವಹಿಸುವಲ್ಲಿ ಪ್ರಧಾನಿ ಮೋದಿಯವರ ವೈಯಕ್ತಿಕ ಕೊಡುಗೆಯನ್ನು ಅವರು ಒತ್ತಿ ಹೇಳಿದರು.

“ಈ ಉದಾರ ಕೊಡುಗೆಗಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಜಿ, ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ಅತ್ಯಂತ ಕೃತಜ್ಞರಾಗಿರುತ್ತೇವೆ” ಎಂದು ಪ್ರವಿಂದ್ ಕುಮಾರ್ ಜುಗ್ನಾಥ್ ಹೇಳಿದರು.

1989 ರಿಂದ ಮಾರಿಷಸ್‌ನಲ್ಲಿ ಆಯುರ್ವೇದಕ್ಕೆ ನೀಡಿರುವ ಕಾನೂನಾತ್ಮಕ ಮಾನ್ಯತೆಯ ವಿವರಗಳನ್ನು ಅವರು ನೀಡಿದರು.

ಜಾಮ್‌ನಗರದಲ್ಲಿ ಆಯುರ್ವೇದ ವೈದ್ಯಕೀಯ ಅಧ್ಯಯನಕ್ಕಾಗಿ ಬರುವ ಮಾರಿಷಸ್‌ನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಿದ್ದಕ್ಕಾಗಿ ಅವರು ಗುಜರಾತ್‌ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಅವರ ಒಳ್ಳೆಯ ಮಾತುಗಳಿಗಾಗಿ ಧನ್ಯವಾದಗಳನ್ನು ತಿಳಿಸಿದರು.

ಭಾರತದೊಂದಿಗೆ ಡಾ. ಟೆಡ್ರೊಸ್ ಘೆಬ್ರೆಯೆಸುಸ್ ಅವರ ಸಂಪರ್ಕ ಮತ್ತು ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರ ಯೋಜನೆಯಲ್ಲಿ ಅವರ ವೈಯಕ್ತಿಕ ಪಾಲ್ಗೊಳ್ಳುವಿಕೆಯ ಬಗ್ಗೆ ಪ್ರಧಾನಿಯವರು ಗಮನ ಸೆಳೆದರು.

ಅವರು ತಮ್ಮ ಪ್ರೀತಿಯನ್ನು ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರದ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಅವರ ನಿರೀಕ್ಷೆಗಳನ್ನು ಭಾರತವು ಈಡೇರಿಸುತ್ತದೆ ಎಂದು ಪ್ರಧಾನಿಯವರು ಭರವಸೆ ನೀಡಿದರು.

ಪ್ರಧಾನ ಮಂತ್ರಿಯವರು ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಮತ್ತು ಅವರ ಕುಟುಂಬದೊಂದಿಗೆ ಮೂರು ದಶಕಗಳ ಕಾಲದ ತಮ್ಮ ಸಂಬಂಧದ ಬಗ್ಗೆ ಮಾತನಾಡಿದರು ಮತ್ತು ಅವರ ಮಾತುಗಳು ಮತ್ತು ಉಪಸ್ಥಿತಿಗಾಗಿ ಅವರಿಗೆ ಧನ್ಯವಾದ ಹೇಳಿದರು.

ವೀಡಿಯೊ ಸಂದೇಶಗಳನ್ನು ಕಳುಹಿಸಿದ ನಾಯಕರಿಗೂ ಮೋದಿ ಧನ್ಯವಾದ ಹೇಳಿದರು.

ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರವು ಈ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮತ್ತು ಸಾಮರ್ಥ್ಯಕ್ಕೆ ದೊರೆತ ಮನ್ನಣೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಭಾರತವು ಈ ಪಾಲುದಾರಿಕೆಯನ್ನು ಇಡೀ ಮನುಕುಲದ ಸೇವೆಗಾಗಿ ಒಂದು ದೊಡ್ಡ ಜವಾಬ್ದಾರಿಯಾಗಿ ಸ್ವೀಕರಿಸುತ್ತದೆ ಎಂದು ಅವರು ಘೋಷಿಸಿದರು.

ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರದ ಸ್ಥಳದ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಸಾಂಪ್ರದಾಯಿಕ ಔಷಧದ ಡಬ್ಲ್ಯುಎಚ್‌ಒ ಜಾಗತಿಕ ಕೇಂದ್ರದ ಸ್ಥಾಪನೆಯೊಂದಿಗೆ ಸ್ವಾಸ್ಥ್ಯ ಕ್ಷೇತ್ರಕ್ಕೆ ಜಾಮ್‌ನಗರದ ಕೊಡುಗೆಗಳು ಜಾಗತಿಕ ಮನ್ನಣೆ ಪಡೆಯುತ್ತವೆ ಎಂದು ಹೇಳಿದರು.

ಐದು ದಶಕಗಳ ಹಿಂದೆ ವಿಶ್ವದ ಮೊದಲ ಆಯುರ್ವೇದ ವಿಶ್ವವಿದ್ಯಾಲಯವನ್ನು ಜಾಮ್‌ನಗರದಲ್ಲಿ ಸ್ಥಾಪಿಸಲಾಯಿತು ಎಂದು ಮೋದಿ ಹೇಳಿದರು.

ನಗರವು ಆಯುರ್ವೇದದಲ್ಲಿ ಬೋಧನೆ ಮತ್ತು ಸಂಶೋಧನೆಗೆ ಗುಣಮಟ್ಟದ ಆಯುರ್ವೇದ ಸಂಸ್ಥೆಯನ್ನು ಹೊಂದಿದೆ ಎಂದು ಅವರು ಹೇಳಿದರು.

ಸ್ವಾಸ್ಥ್ಯದಿಂದ ಇರುವುದೇ ನಮ್ಮ ಅಂತಿಮ ಗುರಿಯಾಗಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು. ರೋಗಮುಕ್ತವಾಗಿರುವುದು ಜೀವನದ ಪ್ರಮುಖ ಭಾಗವಾಗಿರಬಹುದು, ಆದರೆ ಅಂತಿಮ ಗುರಿ ಸ್ವಾಸ್ಥ್ಯದಿಂದ ಇರುವುದಾಗಿರಬೇಕು ಎಂದು ಹೇಳಿದರು. ಸಾಂಕ್ರಾಮಿಕದ ಅವಧಿಯಲ್ಲಿ ಸ್ವಾಸ್ಥ್ಯದ ಪ್ರಾಮುಖ್ಯದ ಅರಿವಾಯಿತು ಎಂದು ಪ್ರಧಾನ ಮಂತ್ರಿಯವರು ಹೇಳಿದರು.

ಜಗತ್ತು ಇಂದು ಆರೋಗ್ಯ ಸೇವೆಯ ಹೊಸ ಆಯಾಮವನ್ನು ಹುಡುಕುತ್ತಿದೆ. ‘ಒಂದು ಗ್ರಹ ನಮ್ಮ ಆರೋಗ್ಯ’ ಎಂಬ ಘೋಷಣೆಯನ್ನು ನೀಡುವ ಮೂಲಕ ಡಬ್ಲ್ಯುಎಚ್‌ಒ ‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ಭಾರತೀಯ ದೃಷ್ಟಿಕೋನವನ್ನು ಉತ್ತೇಜಿಸಿರುವುದು ತಮಗೆ ಸಂತಸ ತಂದಿದೆ ಎಂದು ಪ್ರಧಾನಿ ಹೇಳಿದರು.

ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿಯು ಚಿಕಿತ್ಸೆಗೆ ಮಾತ್ರ ಸೀಮಿತವಾಗಿಲ್ಲ. ಇದು ಸಮಗ್ರ ಜೀವನ ವಿಜ್ಞಾನವಾಗಿದೆ ಎಂದು ಪ್ರಧಾನಿ ಹೇಳಿದರು.

ಆಯುರ್ವೇದವು ಕೇವಲ ಉಪಶಮನ ಮತ್ತು ಚಿಕಿತ್ಸೆಯನ್ನು ಮೀರಿದೆ ಎಂದು ಮೋದಿ ಹೇಳಿದರು.

ಆಯುರ್ವೇದವು ಉಪಶಮನ ಮತ್ತು ಚಿಕಿತ್ಸೆಯ ಹೊರತಾಗಿ, ಸಾಮಾಜಿಕ ಆರೋಗ್ಯ, ಮಾನಸಿಕ ಆರೋಗ್ಯ-ಸಂತೋಷ, ಪರಿಸರ ಆರೋಗ್ಯ, ಸಹಾನುಭೂತಿ, ಅಂತಃಕರಣ ಮತ್ತು ಉತ್ಪಾದಕತೆಯನ್ನು ಒಳಗೊಂಡಿದೆ ಎಂದರು. ಆಯುರ್ವೇದವನ್ನು ಜೀವನದ ಜ್ಞಾನವೆಂದು ಪರಿಗಣಿಸಲಾಗಿದೆ ಮತ್ತು ಅದನ್ನು ಐದನೇ ವೇದವೆಂದು ಪರಿಗಣಿಸಲಾಗಿದೆ ಎಂದು ಮೋದಿ ಹೇಳಿದರು.

ಉತ್ತಮ ಆರೋಗ್ಯವು ಸಮತುಲಿತ ಆಹಾರದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ನಮ್ಮ ಪೂರ್ವಜರು ಆಹಾರವನ್ನು ಅರ್ಧದಷ್ಟು ಚಿಕಿತ್ಸೆ ಎಂದೇ ಪರಿಗಣಿಸಿದ್ದಾರೆ ಮತ್ತು ನಮ್ಮ ವೈದ್ಯಕೀಯ ವ್ಯವಸ್ಥೆಗಳು ಆಹಾರದ ಸಲಹೆಯಿಂದ ತುಂಬಿವೆ ಎಂದು ಅವರು ವಿವರಿಸಿದರು.

ವಿಶ್ವಸಂಸ್ಥೆಯು 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಘೋಷಿಸಿರುವುದು ಭಾರತಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು. ಈ ಕ್ರಮವು ಮನುಕುಲಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

ಜಾಗತಿಕವಾಗಿ ಆಯುರ್ವೇದ, ಸಿದ್ಧ, ಯುನಾನಿ ಸೂತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ಬಗ್ಗೆ ಪ್ರಧಾನಿಯವರು ಗಮನ ಸೆಳೆದರು. ಏಕೆಂದರೆ ಅನೇಕ ದೇಶಗಳು ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಾಂಪ್ರದಾಯಿಕ ಔಷಧಕ್ಕೆ ಒತ್ತು ನೀಡುತ್ತಿವೆ. ಅಂತೆಯೇ, ಯೋಗವು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿದೆ. ಮಧುಮೇಹ, ಸ್ಥೂಲಕಾಯ ಮತ್ತು ಖಿನ್ನತೆಯಂತಹ ಕಾಯಿಲೆಗಳ ವಿರುದ್ಧ ಹೋರಾಡಲು ಯೋಗವು ಅಪಾರವಾಗಿ ನೆರವಾಗಿದೆ ಎಂದು ಮೋದಿ ತಿಳಿಸಿದರು.

ಯೋಗವು ಜನರಿಗೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸು, ದೇಹ ಮತ್ತು ಪ್ರಜ್ಞೆಯಲ್ಲಿ ಸಮತೋಲನವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಡಬ್ಲ್ಯುಎಚ್‌ಒ-ಜಿಸಿಟಿಎಂ ಸ್ಥಾಪನೆಯೊಂದಿಗೆ ಈ ಸಂಪ್ರದಾಯಕ್ಕೆ ಮತ್ತಷ್ಟು ಪುಷ್ಟಿ ದೊರೆಯುತ್ತದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!