ನವದೆಹಲಿ: ಸಮಾಜವಾದಿ ಪಕ್ಷದ ವರಿಷ್ಠ ನಾಯಕ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಇಂದು ಬಿಜೆಪಿಗೆ ಸೇರ್ಪಡೆಯಾದರು.
ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮೊದಲು ಎಂಬ ಸಿದ್ಧಾಂತವನ್ನು ನಾನು ನಂಬಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯಿಂದ ಪ್ರಭಾವಿತಳಾಗಿ ನಾನು ಬಿಜೆಪಿ ಸೇರಿದ್ದೇನೆ.
ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ, ಮಹಿಳೆಯರ ಕಲ್ಯಾಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಯೋಜನೆಗಳನ್ನು ಮೆಚ್ಚಿಕೊಂಡಿದ್ದೇನೆ ಎಂದರು.
ಅಪರ್ಣಾ ಯಾದವ್ ಅವರು ಮ್ಯಾಂಚೆಸ್ಟರ್ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದು, ಮಹಿಳೆಯರ ಅಭಿವೃದ್ಧಿಗಾಗಿ ‘ಬಿ ಎವೇರ್’ ಎಂಬ ಸರಕಾರೇತರ ಸಂಸ್ಥೆ ಹಾಗೂ ಗೋಶಾಲೆಯೊಂದನ್ನು ನಡೆಸುತ್ತಿದ್ದಾರೆ.
ಅಪರ್ಣಾ ಯಾದವ್ ಅವರು 2017 ರಲ್ಲಿ ಲಕ್ನೋ ಕಾಂಟ್ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಜೀವನವನ್ನು ಆರಂಭಿಸಿದ್ದರು. ಬಿಜೆಪಿಯ ರೀತಾ ಬಹುಗುಣ ಜೋಷಿ ವಿರುದ್ಧ ಅವರು ಪರಾಭವಗೊಂಡಿದ್ದರು.
ಮೂಲಗಳ ಪ್ರಕಾರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋ ಕಾಂಟ್ ಕ್ಷೇತ್ರದಿಂದ ಅಪರ್ಣಾ ಯಾದವ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಯಿದೆ.