ಅಯೋಧ್ಯ, ಜ.24: ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಒಂದು ದಿನದ ನಂತರ ಗರ್ಭಗುಡಿಯಲ್ಲಿ ಮಂಗವೊಂದು ವೇಗವಾಗಿ ಪ್ರವೇಶಿಸಿ ಗರ್ಭಗುಡಿಯ ಬಳಿ ಉತ್ಸವ ಮೂರ್ತಿಯತ್ತ ತೆರಳುತ್ತಿದ್ದಾಗ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಅದನ್ನು ಓಡಿಸಲು ಹೋದಾಗ ಅದು ವಿಚಲಿತಗೊಳ್ಳದೇ ತನ್ನ ವೇಗವನ್ನು ತಗ್ಗಿಸಿ ಭಕ್ತರ ನಡುವೆಯಿಂದಲೇ ಹೊರಗೆ ಹೋದ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
‘ಮಂಗಳವಾರ ಸಂಜೆ ಸುಮಾರು 5.50 ಗಂಟೆಗೆ ದೇವಳದ ದಕ್ಷಿಣದ ಗೇಟ್ ಮೂಲಕ ಮಂಗವೊಂದು ಗರ್ಭಗುಡಿಯೊಳಗೆ ಪ್ರವೇಶಿಸಿತು. ಉತ್ಸವ ಮೂರ್ತಿಯ ಬಳಿ ತೆರಳುತ್ತಿದ್ದಾಗ, ಮೂರ್ತಿಯನ್ನು ಬೀಳಿಸಬಹುದು ಎಂಬ ಯೋಚನೆಯೊಂದಿಗೆ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಇದನ್ನು ಓಡಿಸಲು ಬಂದಾಗ, ಅದು ವಿಚಲಿತಗೊಳ್ಳದೇ ಉತ್ತರ ದಿಕ್ಕಿನ ಗೇಟ್ ಬಳಿ ತೆರಳಿತು. ಅದು ಮುಚ್ಚಿದ ಕಾರಣ, ಕೋತಿಯು ಪೂರ್ವ ದಿಕ್ಕಿನತ್ತ ತೆರಳಿ ಭಕ್ತರ ನಡುವೆಯಿಂದಲೇ ಯಾರಿಗೂ ತೊಂದರೆ ಕೊಡದೇ ಹೊರಗಡೆ ಹೋಗಿದೆ. ಹನುಮಂತನೇ ತನ್ನ ಪ್ರಭುವಿನ ದರ್ಶನಕ್ಕೆಂದು ಬಂದ ಹಾಗಾಯಿತು ಎಂದು ಅಲ್ಲಿದ್ದ ಭದ್ರತಾ ಸಿಬ್ಬಂದಿ ಹೇಳಿದರು’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಎಕ್ಸ್ ನಲ್ಲಿ ಪ್ರಕಟಿಸಿದೆ.