ಪ್ರಯಾಗರಾಜ್, ಫೆ.5: ಕಿತ್ತಳೆ ಬಣ್ಣದ ಪೂರ್ಣ ತೋಳಿನ ಜೆರ್ಸಿ, ನೀಲಿ ಬಣ್ಣದ ಪ್ಯಾಂಟ್ ಮತ್ತು ರುದ್ರಾಕ್ಷ ಹಾರವನ್ನು ಧರಿಸಿ, ಪ್ರಧಾನಿ ನರೇಂದ್ರ ಮೋದಿ ಮಂತ್ರಗಳನ್ನು ಪಠಿಸುತ್ತಾ ಬುಧವಾರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಪೌಷ ಪೂರ್ಣಿಮೆ (ಜನವರಿ 13) ರಂದು ಪ್ರಾರಂಭವಾದ ಮಹಾ ಕುಂಭಮೇಳವು ಫೆಬ್ರವರಿ 26 ರಂದು ಮಹಾಶಿವರಾತ್ರಿಯವರೆಗೆ ಮುಂದುವರಿಯುತ್ತದೆ. ಪ್ರಧಾನಿಯವರ ಭೇಟಿಗೆ ಮುಂಚಿತವಾಗಿ ಭದ್ರತಾ ಕ್ರಮಗಳನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿತ್ತು. ಸಂಗಮದ ಸುತ್ತಮುತ್ತಲಿನ ಪ್ರದೇಶಗಳನ್ನು ಹೈ-ಸೆಕ್ಯುರಿಟಿ ವಲಯಗಳಾಗಿ ಘೋಷಿಸಲಾಗಿದೆ. ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಪೊಲೀಸರು ಮತ್ತು ಇತರ ಸಿಬ್ಬಂದಿ ಸೇರಿದಂತೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಪ್ರಧಾನಿಯವರು ಅರೈಲ್ ಘಾಟ್‌ನಿಂದ ತ್ರಿವೇಣಿ ಸಂಗಮದವರೆಗೆ ದೋಣಿ ವಿಹಾರ ನಡೆಸಿದರು. ಇದುವರೆಗೆ 38 ಕೋಟಿಗೂ ಹೆಚ್ಚು ಯಾತ್ರಿಕರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದಾರೆ.
“ಇಂದು, ಪ್ರಯಾಗರಾಜ್ ಮಹಾಕುಂಭದಲ್ಲಿ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಪೂಜೆ-ಅರ್ಚನ ಮಾಡುವ ಮಹಾ ಭಾಗ್ಯ ನನಗೆ ಸಿಕ್ಕಿತು. ಗಂಗೆಯ ಆಶೀರ್ವಾದದಿಂದ ನನಗೆ ಅಪಾರ ಶಾಂತಿ ಮತ್ತು ತೃಪ್ತಿ ಸಿಕ್ಕಿತು. ಎಲ್ಲಾ ದೇಶವಾಸಿಗಳ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸಿದೆ. ಹರ್-ಹರ್ ಗಂಗೇ” ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮೊದಲು, ಪ್ರಧಾನಿ ಮೋದಿ ತ್ರಿವೇಣಿ ಸಂಗಮ ತಲುಪಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ದೋಣಿ ವಿಹಾರ ಮಾಡಿದರು.