ನವದೆಹಲಿ, ಡಿ.17: ಕೇರಳದಲ್ಲಿ ಕೋವಿಡ್‌ನ ಜೆ.ಎನ್.1 ಸಬ್‌ವೇರಿಯಂಟ್‌ನ ಪ್ರಕರಣ ಪತ್ತೆಯಾಗಿದ ಬೆನ್ನಲ್ಲೇ, ಕೇಂದ್ರ ಆರೋಗ್ಯ ಸಚಿವಾಲಯ ತುರ್ತು ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾತನಾಡಿ, ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮೂರು ತಿಂಗಳ ಹಿಂದೆ ಇದು ಭಾರತೀಯರಲ್ಲಿ ಪತ್ತೆಯಾಗಿದೆ. ಸಿಂಗಾಪುರ ವಿಮಾನ ನಿಲ್ದಾಣದಲ್ಲಿ ಪರೀಕ್ಷಿಸಲಾಯಿತು, ಇದು ಭಾರತದ ಇತರ ಭಾಗಗಳಲ್ಲಿಯೂ ಇದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.
ಕೇಂದ್ರ ಸಚಿವಾಲಯವು ಕೇರಳ ಆರೋಗ್ಯ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಕೇರಳಕ್ಕೆ ಸಂಪರ್ಕ ಕಲ್ಪಿಸುವ ಕಡೆಗಳಲ್ಲಿ ಸೋಂಕಿನ ಹರಡುವಿಕೆಯನ್ನು ತಡೆಯುವ ಸಲುವಾಗಿ ಕಾರ್ಯಾಚರಣೆ ಆರಂಭವಾಗಿದೆ. ದೇಶಾದ್ಯಂತ ಒಂದೇ ದಿನ 339 ಮಂದಿ ಕೋವಿಡ್ ಸೋಂಕಿತರಾಗಿದ್ದಾರೆ. ದೇಶದಲ್ಲಿ ಒಟ್ಟು 1492 ಸಕ್ರಿಯ ಕೋವಿಡ್ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಅಯ್ಯಪ್ಪ ಮಾಲಾಧಾರಿಗಳು ಎಚ್ಚರಿಕೆ ವಹಿಸಬೇಕು: ಶಬರಿಮಲೆ ಯಾತ್ರಾರ್ಥಿಗಳು ಅತ್ಯಧಿಕವಾಗಿರುವ ಈ ಸಂದರ್ಭದಲ್ಲಿ ಕೇರಳಕ್ಕೆ ಹೋಗುವವರು ಮತ್ತು ಅಲ್ಲಿಂದ ಹಿಂದಿರುಗುವವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಸೂಕ್ತ. ದೇಶದ ಮೂಲೆಮೂಲೆಗಳಿಂದ ಶಬರಿಮಲೆಗೆ ತೆರಳುವ ಮಾಲಾಧಾರಿಗಳು ಆದಷ್ಟು ಮಾಸ್ಕ್ ಧರಿಸುವುದು, ಕೈಗಳ ಶುಚಿತ್ವ ಕಾಪಾಡುವುದು, ಕೇರಳದಲ್ಲಿ ಹೈ ರಿಸ್ಕ್ ಇರುವ ಕಡೆಗಳಿಗೆ ಹೋಗದಿರುವುದು ಸೂಕ್ತ.