ಜಲ್ಪೈಗುರಿ (ಪ.ಬಂಗಾಳ), ಜೂ.17: ಸೋಮವಾರ ಬೆಳಗ್ಗೆ ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದ ಬಳಿ ಗೂಡ್ಸ್ ರೈಲು ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಗೆ ಢಿಕ್ಕಿ ಹೊಡೆದ ಪರಿಣಾಮ ರೈಲು ಹಳಿತಪ್ಪಿ ಎಂಟು ಜನರು ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದಾರೆ. ಕಂಟೈನರ್ ರೈಲು ಸಿಗ್ನಲ್ ಅನ್ನು ಮೀರಿ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಎನ್‌ಡಿಆರ್‌ಎಫ್, ವಿಭಾಗೀಯ ತಂಡ ಮತ್ತು 15 ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ತಲುಪಿವೆ. ವಿವಿಧೆಡೆ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ರೈಲು ಅಪಘಾತ ದುಃಖಕರವಾಗಿದೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಅವಲೋಕಿಸಿದ್ದೇನೆ. ಸಂತ್ರಸ್ತರ ನೆರವಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಕ್ಷಣಾ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ನಡೆಯುತ್ತಿವೆ. ರೈಲ್ವೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಲಾಗುವುದು. ತೀವ್ರವಾಗಿ ಗಯಗೊಂಡವರಿಗೆ 2.5 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 50,000 ಪರಿಹಾರವನ್ನು ರೈಲ್ವೆ ಸಚಿವರು ಘೋಷಿಸಿದ್ದಾರೆ.