ನವದೆಹಲಿ: ಜಪಾನ್ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 3.2 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಹೇಳಿದರು. ಇಂದು ಭಾರತವು ಪ್ರಪಂಚದಾದ್ಯಂತ ಮೇಕ್ ಇನ್ ಇಂಡಿಯಾ ಪರಿಚಯಿಸಿದೆ. ಈ ಹಿನ್ನೆಲೆಯಲ್ಲಿ ಜಪಾನಿನ ಕಂಪನಿಗಳು ನಮ್ಮ ಬ್ರ್ಯಾಂಡ್ ಅಂಬಾಸಿಡರ್ ಆಗಿ ದೀರ್ಘಕಾಲ ಕಾರ್ಯನಿರ್ವಹಿಸುತ್ತಿವೆ ಎಂದರು.
ಭಾರತದ ಪ್ರಮುಖ ಯೋಜನೆಗಳಾದ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಮತ್ತು ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್‌ನಲ್ಲಿ ಜಪಾನ್‌ನ ಸಹಕಾರ ಗಮನಾರ್ಹವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಕೊಡುಗೆಗಾಗಿ ಭಾರತವು ಜಪಾನ್‌ಗೆ ಕೃತಜ್ಞತೆ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು.
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಯಲ್ಲಿ ಉತ್ತಮ ಪ್ರಗತಿಯಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತ ಮತ್ತು ಜಪಾನ್ ಎರಡೂ ಸುರಕ್ಷಿತ, ವಿಶ್ವಾಸಾರ್ಹ, ಸ್ಥಿರವಾದ ಇಂಧನ ಪೂರೈಕೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿವೆ.
ಸುಸ್ಥಿರ ಆರ್ಥಿಕ ಬೆಳವಣಿಗೆಯ ಗುರಿಯನ್ನು ಸಾಧಿಸುವುದು ಮತ್ತು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ನಿಭಾಯಿಸುವುದು ಅತ್ಯಗತ್ಯ. ಭಾರತ-ಜಪಾನ್ ಕ್ಲೀನ್ ಎನರ್ಜಿ ಸಹಭಾಗಿತ್ವವು ಈ ದಿಕ್ಕಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಮುಂದಿನ ಐದು ವರ್ಷಗಳಲ್ಲಿ ಜಪಾನ್ ಭಾರತದಲ್ಲಿ ತನ್ನ ಹೂಡಿಕೆ ಗುರಿಯನ್ನು 5 ಟ್ರಿಲಿಯನ್ ಯೆನ್ ಅಥವಾ 3.2 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಸಲಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.