ನವದೆಹಲಿ, ಸೆ.18: ಜಮ್ಮು ಮತ್ತು ಕಾಶ್ಮೀರವು ಕಳೆದ 35 ವರ್ಷಗಳಲ್ಲಿ ಅತಿ ಹೆಚ್ಚು ಮತದಾನವನ್ನು ದಾಖಲಿಸಿದೆ. ಕೇಂದ್ರಾಡಳಿತ ಪ್ರದೇಶವು ಬುಧವಾರ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 59 ಪ್ರತಿಶತದಷ್ಟು ಮತದಾನವನ್ನು ಕಂಡಿದೆ. ಪುಲ್ವಾಮಾ, ಶೋಪಿಯಾನ್, ಕುಲ್ಗಾಮ್, ಕಿಶ್ತ್ವಾರ್, ಅನಂತ್‌ನಾಗ್, ರಾಂಬನ್ ಮತ್ತು ದೋಡಾದ ಏಳು ಜಿಲ್ಲೆಗಳ ಎಲ್ಲಾ 24 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿದೆ.
ಯುವಜನರು ಮತ್ತು ಮಹಿಳಾ ಮತದಾರರು ಮತದಾನ ಕೇಂದ್ರಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗವು ಹೇಳಿದೆ. ಕಾಶ್ಮೀರ ಭಾಗದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು ಕುಲ್ಗಾಮ್ ಜಿಲ್ಲೆಯಲ್ಲಿ. ಅಲ್ಲಿ ಶೇ.61.57 ರಷ್ಟು ಮತದಾನವಾಗಿದ್ದರೆ, ಜಮ್ಮು ವಿಭಾಗದ ಕಿಶ್ತ್ವಾರ್ ಜಿಲ್ಲೆಯಲ್ಲಿ ಶೇ.77.23ರಷ್ಟು ಮತದಾನವಾಗಿದೆ. ಬೆಳಗ್ಗೆ 7ಕ್ಕೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6ಕ್ಕೆ ಮುಕ್ತಾಯವಾಯಿತು.
ಎಲ್ಲಾ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಜೊತೆಗೆ, 32 ಕೇಂದ್ರ ವೀಕ್ಷಕರು ಚುನಾವಣಾ ಪ್ರಕ್ರಿಯೆಯ ಮೇಲೆ ನಿಗಾ ಇಟ್ಟಿದ್ದು, ಚುನಾವಣಾ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ ಖಾತ್ರಿಪಡಿಸಿದ್ದಾರೆ. ಕಾಶ್ಮೀರಿ ವಲಸಿಗ ಮತದಾರರು ಜಮ್ಮು, ಉಧಂಪುರ ಮತ್ತು ದೆಹಲಿಯಲ್ಲಿ 24 ವಿಶೇಷ ಮತಗಟ್ಟೆಗಳ ಮೂಲಕ ತಮ್ಮ ಹಕ್ಕು ಚಲಾಯಿಸಲು ಅಧಿಕಾರವನ್ನು ಪಡೆದರು. ವಿಧಾನಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಮನೆ-ಮತದಾನ ಸೌಲಭ್ಯವನ್ನು ಪರಿಚಯಿಸಲಾಯಿತು.