ಪ್ರಯಾಗರಾಜ್, ಜ.30: ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರು ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಪವಿತ್ರ ಸ್ನಾನ ಮಾಡಿದರು. ಇಲ್ಲಿಯ ಆಧ್ಯಾತ್ಮಿಕತೆ, ಭಕ್ತಿಯ ಸವಿಯನ್ನು ಅನುಭವಿಸಿದ್ದೇನೆ. ಅಮೆರಿಕ ಜನಸಂಖ್ಯೆಗಿಂತ ಹೆಚ್ಚಿನ ಜನಸಮೂಹದ ನಡುವೆ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳದಲ್ಲಿ ಭಾಗವಹಿಸಿದ ಡಚ್ ವಿಮಾನಯಾನ ಕಾರ್ಯನಿರ್ವಾಹಕ ಅಧಿಕಾರಿ ಇದನ್ನು ಪದಗಳಿಗೆ ಮೀರಿದ ಅನುಭವ ಎಂದು ಬಣ್ಣಿಸಿದ್ದಾರೆ.
ಲಿಂಕ್ಡ್ಇನ್ನಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಎಲ್ಬರ್ಸ್, ಮಹಾ ಕುಂಭ 2025 ಅದ್ಭುತ ಕಾರ್ಯಕ್ರಮ ಎಂದು ಬಣ್ಣಿಸಿದರು. ಕೇವಲ 45 ದಿನಗಳಲ್ಲಿ ಅಂದಾಜು 450 ಮಿಲಿಯನ್ ಜನರು ಪಾಲ್ಗೊಂಡಿರುವುದು ನಂಬಿಕೆ ಮತ್ತು ಭಕ್ತಿಗೆ ಹಿಡಿದ ಕನ್ನಡಿ. ನಾನು ಭಾರತದ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಪರಂಪರೆಯ ಸಂಗಮವನ್ನು ಆಚರಿಸುವ ಮಹಾ ಕುಂಭಮೇಳದಲ್ಲಿದ್ದೆ, ಇದೊಂದು ವಿಶೇಷ ಅನುಭವ ಎಂದು ಎಲ್ಬರ್ಸ್ ಬರೆದಿದ್ದಾರೆ.
ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಬೆಳಿಗ್ಗೆ 5 ಗಂಟೆಗೆ ಪವಿತ್ರ ಸ್ನಾನ ಮಾಡಿ, ಜಪ, ಪ್ರಾರ್ಥನೆ ಮತ್ತು ಜನಸಮೂಹದ ನಡುವೆ ಅಪರೂಪದ ಶಾಂತಿಯ ಕ್ಷಣವನ್ನು ಕಂಡುಕೊಂಡೆ ಎಂದು ಅವರು ಹಂಚಿಕೊಂಡರು. ಜನದಟ್ಟಣೆಯನ್ನು ನಿಭಾಯಿಸಿದ್ದಕ್ಕಾಗಿ ಅವರು ಪ್ರಯಾಗ್ರಾಜ್ ವಿಮಾನ ನಿಲ್ದಾಣದ ಇಂಡಿಗೋ ತಂಡದ ಪ್ರಯತ್ನವನ್ನು ಶ್ಲಾಘಿಸಿದರು.