ನವದೆಹಲಿ: ನವದೆಹಲಿಯಲ್ಲಿ ನಡೆದ 14 ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯ ನಂತರ ಸೈಬರ್ ಭದ್ರತೆ, ತ್ಯಾಜ್ಯ ನೀರು ನಿರ್ವಹಣೆ ಮತ್ತು ಶುದ್ಧ ಇಂಧನ ಸೇರಿದಂತೆ ಆರು ಒಪ್ಪಂದಗಳಿಗೆ ಭಾರತ ಮತ್ತು ಜಪಾನ್ ಸಹಿ ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಮಾತುಕತೆ ನಡೆಸಿ ಉಭಯ ದೇಶಗಳ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮತ್ತು ಅದರಾಚೆಗಿನ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಪಾಲುದಾರಿಕೆಯನ್ನು ಮುನ್ನಡೆಸಲು ಅವರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಭಾರತ ಮತ್ತು ಜಪಾನ್ ತಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ವ್ಯಾಪ್ತಿಯಲ್ಲಿ ಬಹುಮುಖಿ ಸಹಕಾರವನ್ನು ಹೊಂದಿವೆ. ವಾರ್ಷಿಕ ಶೃಂಗಸಭೆಯ ನಂತರ, ಇಬ್ಬರೂ ನಾಯಕರು ಜಂಟಿ ಹೇಳಿಕೆಗೆ ಸಹಿ ಹಾಕಿದರು.
ಕೋವಿಡ್-19 ಮತ್ತು ಅದರ ದುಷ್ಪರಿಣಾಮಗಳೊಂದಿಗೆ ಜಗತ್ತು ಇನ್ನೂ ಚೇತರಿಸಿಕೊಳ್ಳುತ್ತಿದೆ. ಜಾಗತಿಕ ಆರ್ಥಿಕ ಚೇತರಿಕೆಯ ಪ್ರಕ್ರಿಯೆಯಲ್ಲಿ ಇನ್ನೂ ಅಡೆತಡೆಗಳಿವೆ. ಭೌಗೋಳಿಕ-ರಾಜಕೀಯ ಘಟನೆಗಳು ಸಹ ಹೊಸ ಸವಾಲುಗಳನ್ನು ಪ್ರಸ್ತುತಪಡಿಸುತ್ತಿವೆ ಎಂದುಪ್ರಧಾನಿ ಮೋದಿ ಹೇಳಿದರು.
ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ತಮ್ಮ ಹೇಳಿಕೆಯಲ್ಲಿ, ಅನೇಕ ಅವಾಂತರಗಳಿಂದ ಇಡೀ ಜಗತ್ತು ಇಂದು ತತ್ತರಿಸಿದೆ. ಭಾರತ ಮತ್ತು ಜಪಾನ್ ನಿಕಟ ಪಾಲುದಾರಿಕೆಯನ್ನು ಹೊಂದುವುದು ಬಹಳ ಮುಖ್ಯ ಎಂದರು. ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಕಾನೂನಿನ ಆಧಾರದ ಮೇಲೆ ಶಾಂತಿಯುತ ಪರಿಹಾರಕ್ಕೆ ಒತ್ತು ನೀಡಬೇಕು ಎಂದರು.
ಉಭಯ ನಾಯಕರು ಭಾರತ-ಜಪಾನ್ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರ ಕೈಗೊಂಡ ಸುಧಾರಣೆಗಳ ಬಗ್ಗೆ ಮಾತನಾಡಿದರು ಮತ್ತು ಭಾರತದಲ್ಲಿ ಹೂಡಿಕೆ ಮಾಡಲು ಜಪಾನ್ ಕಂಪನಿಗಳನ್ನು ಆಹ್ವಾನಿಸಿದರು. ಜಪಾನಿನ ಕಂಪನಿಗಳಿಗೆ ತಮ್ಮ ಸರ್ಕಾರವು ಭಾರತದಲ್ಲಿ ಅವುಗಳ ಸ್ಥಾಪನೆಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಉಭಯ ದೇಶಗಳ ನಡುವಿನ ಬಾಂಧವ್ಯವು ಗಟ್ಟಿಯಾದ ತಳಹದಿಯ ಮೇಲೆ ನಿಂತಿದೆ ಮತ್ತು ಇದರಿಂದ ಎರಡೂ ದೇಶಗಳು ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದರು.
ಕಳೆದ ವರ್ಷ ಅಧಿಕಾರ ವಹಿಸಿಕೊಂಡ ನಂತರ ಇದು ಜಪಾನ್ ಪ್ರಧಾನಿ ಕಿಶಿದಾ ಅವರ ಮೊದಲ ಭಾರತ ಭೇಟಿಯಾಗಿದೆ.