ಭುವನೇಶ್ವರ್: ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಗುತ್ತಿಗೆ ನೇಮಕಾತಿ ವ್ಯವಸ್ಥೆಯನ್ನು ರದ್ದುಪಡಿಸಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ 57 ಸಾವಿರ ನೌಕರರನ್ನು ಕಾಯಂಗೊಳಿಸಿ ಭಾನುವಾರ ಅಧಿಸೂಚನೆ ಹೊರಡಿಸಿದೆ.
ಚಾರಿತ್ರಿಕ ನಿರ್ಧಾರದ ಕುರಿತು ಕ್ಯಾಬಿನೆಟ್ ಸಭೆಯ ನಂತರ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ಇದೊಂದು ಐತಿಹಾಸಿಕ ನಿರ್ಧಾರವಾಗಿದೆ. ಹಲವಾರು ರಾಜ್ಯಗಳಲ್ಲಿ ಇನ್ನೂ ಕೂಡ ಗುತ್ತಿಗೆ ಆಧಾರದ ನೇಮಕಾತಿ ವ್ಯವಸ್ಥೆಯಿದೆ. ಒಡಿಶಾದಲ್ಲಿ ಗುತ್ತಿಗೆ ಆಧಾರಿತ ವ್ಯವಸ್ಥೆ ಕೊನೆಗೊಂಡಿದೆ. 2013 ರಲ್ಲಿ ಗುತ್ತಿಗೆ ಆಧಾರಿತ ನೇಮಕಾತಿ ವ್ಯವಸ್ಥೆ ಆರಂಭವಾಗಿತ್ತು. ಒಡಿಶಾದ ಆರ್ಥಿಕ ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ ಎಂದು ಮುಖ್ಯಮಂತ್ರಿ ಸಂತಸ ವ್ಯಕ್ತಪಡಿಸಿದರು.
ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ 1300 ಕೋಟಿ ರೂಪಾಯಿ ವೆಚ್ಚವಾಗಲಿದೆ. ಅಧಿಸೂಚನೆಯ ಪ್ರಕಾರ, ಈ ನಿಯಮಗಳನ್ನು ಈಗ ಒಡಿಶಾ ಗ್ರೂಪ್ ಬಿ, ಸಿ ಮತ್ತು ಡಿ ಪೋಸ್ಟ್ಗಳು(ರದ್ದತಿ ಮತ್ತು ವಿಶೇಷ ನಿಬಂಧನೆಗಳು) ನಿಯಮಗಳು, 2022 ಎಂದು ಕರೆಯಲಾಗುವುದು ಮತ್ತು ಒಡಿಶಾ ಗೆಜೆಟ್ನಲ್ಲಿ ಅವುಗಳ ಪ್ರಕಟಣೆಯ ದಿನಾಂಕದಂದು ಜಾರಿಗೆ ಬರಲಿದೆ.