ಶ್ರೀನಗರ, ಸೆ.14: ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಯ ಪ್ರಚಾರ ಭರದಿಂದ ಸಾಗಿದೆ. ಈ ಹಂತದಲ್ಲಿ 24 ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 18 ರಂದು ಮತದಾನ ನಡೆಯಲಿದೆ. ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ ದೋಡಾ ಜಿಲ್ಲೆಯಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಕೂಡ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿವೆ.
ಏತನ್ಮಧ್ಯೆ, ಮಾಜಿ ಮುಖ್ಯಮಂತ್ರಿ ಮತ್ತು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಕ್ಷದ ಅಧ್ಯಕ್ಷ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ದಕ್ಷಿಣ ಕಾಶ್ಮೀರದ ದೂರು, ಖಾಜಿಗುಂಡ್ ಮತ್ತು ದೇವ್‌ಸರ್‌ನಲ್ಲಿ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಕೇಂದ್ರಾಡಳಿತ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಎರಡನೇ ಹಂತದ ಮತದಾನ ಸೆಪ್ಟೆಂಬರ್ 25 ರಂದು ಮತ್ತು ಮೂರನೇ ಹಂತದ ಮತದಾನ ಅಕ್ಟೋಬರ್ 1 ರಂದು ನಡೆಯಲಿದೆ. ಏತನ್ಮಧ್ಯೆ, ಶುಕ್ರವಾರ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ನಾಮಪತ್ರಗಳ ಪರಿಶೀಲನೆಯ ನಂತರ, 449 ಸ್ಪರ್ಧಿಗಳ ಉಮೇದುವಾರಿಕೆ ಮಾನ್ಯವಾಗಿದೆ. ಉಮೇದುವಾರಿಕೆ ಹಿಂಪಡೆಯಲು ಸೆಪ್ಟೆಂಬರ್ 17 ಕೊನೆಯ ದಿನವಾಗಿದೆ.