ಯು.ಬಿ.ಎನ್.ಡಿ., ಡಿ.20: ಶುಕ್ರವಾರ ನಸುಕಿನ ವೇಳೆ ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಬೃಹತ್ ಎಲ್‌ಪಿಜಿ ಟ್ಯಾಂಕರ್ ಸ್ಫೋಟಗೊಂಡು ಎಂಟು ಜನರು ಸಾವನ್ನಪ್ಪಿ ಹಲವರಿಗೆ ತೀವ್ರ ಸುಟ್ಟಗಾಯಗಳಾಗಿವೆ. ಸುಮಾರು 40 ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯ ನಂತರ 39 ಜನರನ್ನು ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳನ್ನು ಭೇಟಿಯಾಗಲು ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಆಸ್ಪತ್ರೆಗೆ ಭೇಟಿ ನೀಡಿದರು. 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ. ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದೆ. ಪೆಟ್ರೋಲ್ ಪಂಪ್ ಬಳಿಯೇ ಸ್ಫೋಟ ಸಂಭವಿಸಿದೆ.
ಏನಾಗಿತ್ತು? ಅಧಿಕಾರಿಗಳ ಪ್ರಕಾರ, ಎಲ್‌ಪಿಜಿ ತುಂಬಿದ ಟ್ಯಾಂಕರ್ ಅಜ್ಮೀರ್‌ನಿಂದ ಜೈಪುರಕ್ಕೆ ಬರುತ್ತಿತ್ತು. ಬೆಳಗಿನ ಜಾವ 5.44ರ ಸುಮಾರಿಗೆ ಯು-ಟರ್ನ್ ತೆಗೆದುಕೊಳ್ಳುತ್ತಿದ್ದಾಗ ಜೈಪುರದಿಂದ ಬರುತ್ತಿದ್ದ ಟ್ರಕ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದು, ಸ್ವಲ್ಪ ಸಮಯದೊಳಗೆ ಇಡೀ ಪ್ರದೇಶ ಬೆಂಕಿಯ ಚೆಂಡಾಗಿದೆ. 30 ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಆವರಿಸಿದ್ದು, ದಟ್ಟವಾದ ಕಪ್ಪು ಹೊಗೆ ಬಾನೆತ್ತರಕ್ಕೆ ವ್ಯಾಪಿಸಿತ್ತು.