ನವದೆಹಲಿ, ಫೆ.8: ಒಟ್ಟು 70 ಸ್ಥಾನವಿರುವ ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ಆರಂಭವಾಗಿದ್ದು ಬಿಜೆಪಿ 48 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಬಹುಮತ ಪಡೆಯಲು ಅಗತ್ಯವಿದ್ದ 36 ಸಂಖ್ಯೆಯನ್ನು ಸುಲಭವಾಗಿ ದಾಟಿದ್ದು, ತನ್ಮೂಲಕ 27 ವರ್ಷಗಳ ನಂತರ ದೆಹಲಿಯ ಗದ್ದುಗೆ ಏರಲು ಸಿದ್ದವಾಗಿದೆ. ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಕ್ಷ 22 ಕಡೆಗಳಲ್ಲಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ ಇಲ್ಲಿಯವರೆಗೂ ಖಾತೆ ತೆರೆಯಲಿಲ್ಲ.
ಮೋದಿ ನೇತೃತ್ವ: ಬಿಜೆಪಿ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ವಹಿಸಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ‘ದೆಹಲಿ ಚಲಿ ಮೋದಿ ಕೆ ಸಾಥ್’ ಎಂಬ ಘೋಷಣೆಯನ್ನು ಹೊಂದಿತ್ತು. ಬಿಜೆಪಿ ತನ್ನ ಪ್ರಚಾರವನ್ನು ದೆಹಲಿ ಕೇಂದ್ರಿತ ಸಮಸ್ಯೆಗಳು ಮತ್ತು ಮುಂದಿನ ಐದು ವರ್ಷಗಳ ಕಾಲ ರಾಷ್ಟ್ರ ರಾಜಧಾನಿಗಾಗಿ ತನ್ನ ಯೋಜನೆಯ ಮೇಲೆ ಕೇಂದ್ರೀಕರಿಸಿತು.
ಆಪ್ ಹ್ಯಾಟ್ರಿಕ್ ಕನಸು ಭಗ್ನ: ಸತತ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವ ನಿರೀಕ್ಷೆಯಿದ್ದ ಆಮ್ ಆದ್ಮಿ ಪಕ್ಷವು 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಭ್ರಷ್ಟಾಚಾರ ವಿರೋಧಿ ನಿಲುವಿನಿಂದ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವು, ಭ್ರಷ್ಟಾಚಾರ ಆರೋಪಗಳಿಂದ ಬಳಲಿ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಂಗಳುಗಟ್ಟಲೆ ಜೈಲಿನಲ್ಲಿ ಕಳೆದ ವಿಚಾರ ಆಪ್ ಗೆ ಹಿನ್ನಡೆ ಉಂಟುಮಾಡಿತು.
ಕಾಂಗ್ರೆಸ್ ಹ್ಯಾಟ್ರಿಕ್ ಶೂನ್ಯ: 1998 ರಿಂದ 2013 ರವರೆಗೆ ದೆಹಲಿಯನ್ನು ಆಳಿದ ಕಾಂಗ್ರೆಸ್, ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾದ ನಂತರ ಈ ಬಾರಿ ಮತ್ತೊಮ್ಮೆ ಯಾವುದೇ ಖಾತೆ ತೆರೆಯದೆ ಹ್ಯಾಟ್ರಿಕ್ ಶೂನ್ಯಕ್ಕೆ ತೃಪ್ತಿ ಪಡೆಯಲಿದೆ.
ಬಿಜೆಪಿ ಸಂಭ್ರಮಾಚರಣೆ: ಮ್ಯಾಜಿಕ್ ಸಂಖ್ಯೆ ದಾಟಿದ ಬೆನ್ನಲ್ಲೇ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ.
2020 ರಲ್ಲಿ ಹೀಗಿತ್ತು ಫಲಿತಾಂಶ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 8 ಸ್ಥಾನ ಪಡೆದಿತ್ತು. ಕಾಂಗ್ರೆಸ್ ಯಾವುದೇ ಖಾತೆ ತೆರೆಯಲಿಲ್ಲ.