ಜಮ್ಮು ಕಾಶ್ಮೀರ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಭಾನುವಾರ ಮುಂಜಾನೆ ಎರಡು ಕಡಿಮೆ ತೀವ್ರತೆಯ ಸ್ಫೋಟಗಳು ಸಂಭವಿಸಿವೆ. ಒಂದು ಸ್ಫೋಟದಿಂದ ಕಟ್ಟಡದ ಮೇಲ್ಚಾವಣಿಗೆ ಸಣ್ಣ ಪ್ರಮಾಣದ ಹಾನಿಯಾಗಿದ್ದು, ಎರಡನೆಯ ಸ್ಪೋಟವು ತೆರೆದ ಪ್ರದೇಶದಲ್ಲಿ ಸಂಭವಿಸಿದೆ. ಅಲ್ಲಿದ್ದ ವಾಯುಪಡೆಯ ಸಲಕರಣೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ವಾಯುಪಡೆ ತಿಳಿಸಿದೆ. ಜಮ್ಮು ವಿಮಾನ ನಿಲ್ದಾಣವು ಭಾರತ ಮತ್ತು ಪಾಕಿಸ್ತಾನದ ಅಂತರಾಷ್ಟ್ರೀಯ ಗಡಿಯಿಂದ 13 ಕಿ.ಮೀ ದೂರದಲ್ಲಿದೆ.
ಭಾನುವಾರ ಮುಂಜಾನೆ 1:27 ರ ಸುಮಾರಿಗೆ ಜಮ್ಮು ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಕಟ್ಟಡದ ಮೇಲ್ಚಾವಣಿಯನ್ನು ಗುರಿಯಾಗಿ ಸ್ಫೋಟ ಸಂಭವಿಸಿದೆ. ಐದು ನಿಮಿಷಗಳ ನಂತರ ಮುಂಜಾನೆ 1:32 ಕ್ಕೆ ಹೆಚ್ಚಿನ ಭದ್ರತೆಯ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಸ್ಪೋಟ ಸಂಭವಿಸಿದ ಸ್ವಲ್ಪ ದೂರದಲ್ಲಿ ನಿಲ್ಲಿಸಿದ ವಾಯುಪಡೆಯ ವಿಮಾನವು ಡ್ರೋನ್‌ಗಳ ಗಳ ಸಂಭವನೀಯ ಗುರಿಯಾಗಿತ್ತು ಎಂದು ಊಹಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನ ಹಾರಾಟಗಳು ಸಾಮಾನ್ಯವಾಗಿದೆ. ಕಾರ್ಯಾಚರಣೆಯ ಕಾರಣಗಳಿಂದಾಗಿ ಭಾನುವಾರ ಎರಡು ವಿಮಾನಗಳನ್ನು ರದ್ದುಪಡಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಜಮ್ಮುವಿನ ವಾಯುಪಡೆ ನಿಲ್ದಾಣಕ್ಕೆ ಆಗಮಿಸಿದೆ.
ಸ್ಫೋಟಗಳ ನಂತರ ವಾಯುಪಡೆಯ ನಿಲ್ದಾಣದಲ್ಲಿ ಹಿರಿಯ ಪೊಲೀಸರು ಮತ್ತು ಭಾರತೀಯ ವಾಯುಪಡೆಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಭೆ ನಡೆಯಿತು. ಸ್ಫೋಟಗಳಲ್ಲಿ ಇಬ್ಬರು ಭಾರತೀಯ ವಾಯುಪಡೆಯ (ಐಎಎಫ್) ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಭಾನುವಾರ ಮೂರು ದಿನಗಳ ಭೇಟಿಗಾಗಿ ಲಡಾಖ್ ಗೆ ಬಂದಿಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಾಯುಪಡೆಯ ಏರ್ ಮಾರ್ಷಲ್ ಎಚ್.ಎಸ್. ಅರೋರಾ ಅವರೊಂದಿಗೆ ಘಟನೆಯ ಕುರಿತು ಮಾತನಾಡಿದರು.
ಓರ್ವ ಉಗ್ರನ ಬಂಧನ: ಜಮ್ಮು ಕಾಶ್ಮೀರ ಪೊಲೀಸರು ನಾರ್ವಾಲ್ ಪ್ರದೇಶದಲ್ಲಿ ಓರ್ವ ಭಯೋತ್ಪಾದಕನನ್ನು ಬಂಧಿಸಿ, ಆತನ ಬಳಿಯಿದ್ದ ಐದು ಸುಧಾರಿತ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ನಡೆದಿತ್ತು ಗ್ರೆನೇಡ್ ದಾಳಿ: ಶನಿವಾರ ಸಿ.ಆರ್.ಪಿ.ಎಫ್ ಮತ್ತು ಜಮ್ಮು ಕಾಶ್ಮೀರ ಪೋಲಿಸರು ಗಸ್ತು ತಿರುಗುವ ಸಂದರ್ಭದಲ್ಲಿ ಶ್ರೀನಗರದಲ್ಲಿ ಉಗ್ರರು ಸೇನಾ ವಾಹನಗಳನ್ನು ಗುರಿಯಾಗಿಸಿ ಗ್ರೆನೇಡ್ ದಾಳಿ ನಡೆಸಿದ್ದರು. ಇದರಲ್ಲಿ ನಾಲ್ವರು ನಾಗರಿಕರು ಗಾಯಗೊಂಡಿದ್ದು ಓರ್ವರು ಮೃತಪಟ್ಟಿದ್ದಾರೆ.
ಜಮ್ಮು ಕಾಶ್ಮೀರದ ಚುನಾವಣೆಗೆ ವಿರೋಧವೇ? ಜಮ್ಮು ಕಾಶ್ಮೀರಕ್ಕೆ ‘ರಾಜ್ಯ’ ಸ್ಥಾನಮಾನ ನೀಡಬೇಕು ಮತ್ತು ಚುನಾವಣೆ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಜಮ್ಮು ಕಾಶ್ಮೀರದ ಸರ್ವಪಕ್ಷ ಸಭೆಯು ಯಶಸ್ವಿಯಾಗಿ ನಡೆದಿತ್ತು. ಸಭೆಯ ನಂತರ ಶನಿವಾರ ನಡೆದ ಗ್ರೆನೇಡ್ ದಾಳಿ ಮತ್ತು ಭಾನುವಾರ ಮುಂಜಾನೆ ವಿಮಾನ ನಿಲ್ದಾಣದಲ್ಲಿ ನಡೆದ ಸ್ಪೋಟ, ಇವೆರಡು ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ನೆರೆಯ ರಾಷ್ಟ್ರ ಉಗ್ರರಿಗೆ ಕುಮ್ಮಕ್ಕು ನೀಡುತ್ತಿದೆಯೇ ಎಂಬ ಬಲವಾದ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.