ನವದೆಹಲಿ: ನಕಲಿ ಮತ್ತು ಕಳಪೆ ಗುಣಮಟ್ಟದ ಔಷಧಿಗಳಿಗೆ ಕಡಿವಾಣ ನಿಲ್ಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮೆಡಿಸಿನ್ ಪ್ಯಾಕೆಟ್ ಮೇಲೆ ‘ಬಾರ್ ಕೋಡ್’ ಕಡ್ಡಾಯಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಖರೀದಿಸಿದ ಔಷಧಿ ಅಸಲಿಯೇ ಅಥವಾ ನಕಲಿಯೇ ಎಂದು ಪರಿಶೀಲಿಸಲು ಇದರಿಂದ ಸಾಧ್ಯವಾಗುತ್ತದೆ. 2023 ಮೇ ತಿಂಗಳಿನಿಂದ ಔಷಧಗಳು ಮತ್ತು ಕಾಸ್ಮೆಟಿಕ್ ನಿಯಮಗಳು ದೇಶಾದ್ಯಂತ ಜಾರಿಗೆ ಬರಲಿವೆ.
ಔಷಧ ಪ್ಯಾಕೆಟ್ ಮೇಲೆ ಮುದ್ರಿಸಲಾದ ಬಾರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ಉತ್ಪಾದನಾ ಪರವಾನಗಿ ಮತ್ತು ಮೆಡಿಸಿನ್ ಬ್ಯಾಚ್ ಸಂಖ್ಯೆ ಮತ್ತು ಸಂಬಂಧಿಸಿದ ಮಾಹಿತಿಯನ್ನು ತಕ್ಷಣ ಕಂಡು ಹಿಡಿಯಬಹುದು. 1945ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ ನಿಯಮಗಳ ತಿದ್ದುಪಡಿಯು 2023 ಮೇ ತಿಂಗಳಿನಿಂದ ಜಾರಿಗೆ ಬರಲಿದೆ. ಮೊದಲ ಹಂತದಲ್ಲಿ, 300 ಔಷಧಿಗಳನ್ನು ಈ ವ್ಯಾಪ್ತಿಗೆ ತರಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.