ವಾರ್ಧಾ, ಸೆ.21: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಲಾಭ ಪಡೆಯುವ ಮೂಲಕ ಕುಶಲಕರ್ಮಿಗಳು ಉದ್ಯಮಿಗಳಾಗುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ವಾರ್ಧಾದ ಸ್ವಾವಲಂಬಾಯಿ ಮೈದಾನದಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಸಾಂಪ್ರದಾಯಿಕ ಉದ್ಯೋಗದ ಉತ್ಪಾದಕತೆಯನ್ನು ಹೆಚ್ಚಿಸುವ ಸಲುವಾಗಿ 6.5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಆಧುನಿಕ ಯಂತ್ರೋಪಕರಣಗಳು ಮತ್ತು ಟೂಲ್‌ಕಿಟ್‌ಗಳನ್ನು ಒದಗಿಸಲಾಗಿದೆ ಎಂದು ಪ್ರಧಾನಿ ಹೇಳಿದರು. 3 ಲಕ್ಷ ರೂಪಾಯಿ ಸಾಲ ನೀಡುವ ಸಾಲ ಯೋಜನೆಯ ಪ್ರಯೋಜನಗಳ ಬಗ್ಗೆಯೂ ತಿಳಿಸಿದರು. ಕಳೆದ ಒಂದು ವರ್ಷದಲ್ಲಿ 1400 ಕೋಟಿ ರೂಪಾಯಿ ಸಾಲವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಈ ಯೋಜನೆಯ ಫಲಾನುಭವಿಗಳು ಹೆಚ್ಚಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಾರೆ ಎಂದು ಅವರು ಒತ್ತಿ ಹೇಳಿದರು.
ಪಿಎಂ ವಿಶ್ವಕರ್ಮ ಯೋಜನೆಯ 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಡಿಜಿಟಲ್ ಐಡಿ ಕಾರ್ಡ್‌ಗಳು ಮತ್ತು ಡಿಜಿಟಲ್ ಸ್ಕಿಲ್ ಪ್ರಮಾಣಪತ್ರಗಳನ್ನು ಪ್ರಧಾನಿ ಬಿಡುಗಡೆ ಮಾಡಿದರು. ಇದಲ್ಲದೇ 75,000 ಫಲಾನುಭವಿಗಳಿಗೆ ಡಿಜಿಟಲ್ ಸಾಲ ಮಂಜೂರಾತಿ ಪತ್ರಗಳನ್ನು ಪ್ರಧಾನಿ ಬಿಡುಗಡೆ ಮಾಡಿದರು. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ 18 ಫಲಾನುಭವಿಗಳಿಗೆ ವಿಶ್ವಕರ್ಮ ಚೆಕ್ ವಿತರಿಸಲಾಯಿತು.