ಚೆನ್ನೈ, ಡಿ.28: ತಮಿಳು ಸೂಪರ್ ಸ್ಟಾರ್ ಮತ್ತು ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸಂಸ್ಥಾಪಕ ವಿಜಯಕಾಂತ್ ಗುರುವಾರ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನ್ಯುಮೋನಿಯಾಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ವೆಂಟಿಲೇಟರ್ ಬೆಂಬಲದಲ್ಲಿ ಇರಿಸಲಾತ್ತು. ಅವರು ಪತ್ನಿ ಪ್ರೇಮಲತಾ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಪ್ರಧಾನಿ ಸಂತಾಪ: ವಿಜಯಕಾಂತ್ ಜಿಯವರ ನಿಧನದಿಂದ ಅತೀವ ದುಃಖವಾಗಿದೆ. ತಮಿಳು ಚಲನಚಿತ್ರ ಪ್ರಪಂಚದ ದಂತಕಥೆ, ಅವರ ವರ್ಚಸ್ವಿ ಪ್ರದರ್ಶನಗಳು ಲಕ್ಷಾಂತರ ಮನಸ್ಸುಗಳನ್ನು ಗೆದ್ದಿದೆ. ರಾಜಕೀಯ ನಾಯಕರಾಗಿ, ಅವರು ಸಾರ್ವಜನಿಕ ಸೇವೆಗೆ ಬದ್ಧರಾಗಿದ್ದರು, ತಮಿಳುನಾಡಿನ ರಾಜಕೀಯ ಕ್ಷೇತ್ರದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿದರು. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ಅವರ ಕುಟುಂಬ, ಅಭಿಮಾನಿಗಳು ಮತ್ತು ಹಲವಾರು ಅನುಯಾಯಿಗಳೊಂದಿಗೆ ಇವೆ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ಸಂತಾಪ ಸೂಚಿಸಿದ್ದಾರೆ.
ಕೋವಿಡ್ ಕಾರಣ?: ವಿಜಯಕಾಂತ್ ಕೊರೊನಾ ಪಾಸಿಟಿವ್ ಆಗಿದ್ದು, ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಪಕ್ಷ ಹೇಳಿಕೆ ನೀಡಿದ ಬೆನ್ನಲ್ಲೇ, ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ಆಸ್ಪತ್ರೆ ಬುಲೆಟಿನ್‌ನಲ್ಲಿ ತಿಳಿಸಲಾಗಿದೆ. ಎರಡನೇ ಸುತ್ತಿನ ಮಾದರಿಗಳ ಫಲಿತಾಂಶಗಳು ಲಭ್ಯವಾಗುವ ಮೊದಲೇ ಪಕ್ಷವು ಆ ಹೇಳಿಕೆಯನ್ನು ನೀಡಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.