ಬೆಂಗಳೂರು: ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ದಿವ್ಯಾ ಹಾಗರಗಿ ಅವರನ್ನು ವಶಕ್ಕೆ ಪಡೆದುಕೊಂಡಿದೆ.
ನಾಪತ್ತೆಯಾಗಿದ್ದ ದಿವ್ಯಾ ಹಾಗರಗಿಗಾಗಿ ಕಳೆದ 18 ದಿನಗಳಿಂದ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು.
ಕಲಬುರಗಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅವರು ನಡೆಸುತ್ತಿದ್ದ ಶಾಲೆಯಲ್ಲಿ ಪಿ.ಎಸ್.ಐ ಅಕ್ರಮ ನಡೆದಿತ್ತು ಎಂದು ತನಿಖೆ ವೇಳೆ ತಿಳಿದುಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿದ್ದ ಸಿಐಡಿ ತಂಡವು ತನಿಖೆಗೆ ಅಸಹಕಾರ, ಆರೋಪಿಗಳ ನಾಪತ್ತೆಗೆ ಬೆಂಬಲ ಆರೋಪದ ಮೇಲೆ ರಾಜೇಶ್ ಹಾಗರಗಿಯನ್ನ ಬಂಧಿಸಿದ್ದರು.
ಪಿ.ಎಸ್.ಐ ಪರೀಕ್ಷೆ ಮುಗಿದ ಮೇಲೆ ಒಎಂಆರ್ ಶೀಟ್ನಲ್ಲಿ ಖಾಲಿ ಬಿಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಸಿದ್ದಾರೆ ಎನ್ನುವುದು ದಿವ್ಯಾ ಹಾಗರಗಿ ವಿರುದ್ಧ ಕೇಳಿ ಬಂದಿರುವ ಪ್ರಮುಖ ದೂರು.
ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಹತ್ತು ಜನ ಅಭ್ಯರ್ಥಿಗಳು ಪಿಎಸ್ಐ ಆಗಿ ನೇಮಕವಾಗಿದ್ದರು.
ಈಗಾಗಲೇ ನಾಲ್ವರು ಅಭ್ಯರ್ಥಿಗಳು ಮತ್ತು ಮೂರು ಜನ ಕೊಠಡಿ ಮೇಲ್ವಿಚಾರಕಿಯರನ್ನು ಪೊಲೀಸರು ಬಂಧಿಸಿದ್ದಾರೆ.