ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಸಂತೋಷ್ ಪಾಟೀಲ್ ಅವರ ಸಹೋದರ ಪ್ರಶಾಂತ ಪಾಟೀಲ್ ಅವರು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಚಿವ ಈಶ್ವರಪ್ಪ ಮತ್ತು ಅವರ ಆಪ್ತ ಸಹಾಯಕರಾದ ಬಸವರಾಜ್, ರಮೇಶ್ ಮತ್ತಿತರರ ಮೇಲೆ ಪ್ರಕರಣ ದಾಖಲಾಗಿದೆ.
ದೂರಿನಲ್ಲಿ ಆತ್ಮಹತ್ಯೆಗೆ ಕಾರಣ ತಿಳಿಸಿರುವ ಪ್ರಶಾಂತ ಪಾಟೀಲ್, ಸಹೋದರ ಸಂತೋಷ್ ಪಾಟೀಲ್ ಹಿಂಡಲಗಾ ಪಂಚಾಯತ್ ವ್ಯಾಪ್ತಿಯ ಲಕ್ಷ್ಮೀದೇವಿ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ. ಹಣವನ್ನು ಬಿಡುಗಡೆ ಮಾಡಲು ಸಚಿವರು ಶೇ. 40 ಕಮಿಷನ್ ಬೇಡಿಕೆ ಇಟ್ಟಿದ್ದರು ಎಂದು ದೂರಿದ್ದಾರೆ.
ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್, ತಮ್ಮ ಆರೋಪ ಭಾರೀ ಚರ್ಚೆಗೆ ಗ್ರಾಸವಾಗಿರುವ ನಡುವಲ್ಲೇ ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ನಂತರ ಅವರ ಮರಣ ಪತ್ರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಾವಿಗೂ ಮುನ್ನ ತಮ್ಮ ಮರಣ ಸಂದೇಶವನ್ನು ಮೊಬೈಲ್ ಮೂಲಕ ಕಳಿಸಿರುವ ಸಂತೋಷ್ ಪಾಟೀಲ್, ಉಡುಪಿಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಸಮೀಪದ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಶ್ವರಪ್ಪ ರಾಜೀನಾಮೆ?
ಸಚಿವ ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಸಚಿವರ ರಾಜೀನಾಮೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.