ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ಮಾಡಿದರೆ ಈ ಸರ್ಕಾರ ಜನರೆದುರು ಬೆತ್ತಲಾಗಲಿದೆ. ಹೀಗಾಗಿಯೇ ನಾವು ಪಾದಯಾತ್ರೆ ಮಾಡಬಾರದು ಎಂದು ಕೊವಿಡ್ ನಿರ್ಬಂಧಗಳೆಂಬ ಷಡ್ಯಂತ್ರ ರೂಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ನಮ್ಮ ಪಾದಯಾತ್ರೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕನಿಷ್ಠ ಅಂತರ ಕಾಪಾಡಿಕೊಂಡು, ಗ್ಲೌಸ್, ಸ್ಯಾನಿಟೈಸರ್ ಬಳಕೆ ಹೀಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಾರೆ. ನಾವು ಸರ್ಕಾರದ ನಿಯಮಗಳನ್ನು ಗೌರವಿಸಿ, ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಪಾದಯಾತ್ರೆ ಮಾಡುತ್ತೇವೆ.
ಕೊರೊನಾ ಸೋಂಕು ತಡೆಗಟ್ಟುವುದೇ ರಾಜ್ಯ ಸರ್ಕಾರದ ನಿಜವಾದ ಉದ್ದೇಶವಾಗಿದ್ದರೆ ಮುಖ್ಯಮಂತ್ರಿಗಳು ನಿನ್ನೆ ರಾಮನಗರದಲ್ಲಿ, ಇಂದು ನಾಗಮಂಗಲದಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರೇ?
ತಮ್ಮದೇ ಸರ್ಕಾರದ ನಿಯಮಗಳನ್ನು ಗೌರವಿಸದ ಮುಖ್ಯಮಂತ್ರಿಯನ್ನು ಬೇರೆ ಎಲ್ಲಾದರೂ ನೋಡಿದ್ದೀರ?
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ನಲ್ಲಿ ಚುನಾವಣಾ ರೇಲಿಯಲ್ಲಿ ಭಾಗವಹಿಸುವವರಿದ್ದರು, ರೈತರ ಪ್ರತಿಭಟನೆ ಇಂದಾಗಿ ಸಭೆ ರದ್ದಾಯಿತು. ಒಂದು ವೇಳೆ ಯಾವುದೇ ಅಡ್ಡಿ ಆಗದೆ ಇದ್ದರೆ ಅವರು ಸಭೆ ಮಾಡುತ್ತಿರಲಿಲ್ಲವೇ? ಬಿಜೆಪಿ ಅವರು ಪ್ರಚಾರ ಸಭೆ ಮಾಡಿದರೆ ಕೊರೊನಾ ಬರೋದಿಲ್ವಾ?
ರಾಜ್ಯದ ಯಾವೊಬ್ಬ ವ್ಯಕ್ತಿಗೂ ಕೊರೊನಾ ಬರಬಾರದು ಎಂಬುದು ನಮ್ಮ ಆಶಯವೂ ಹೌದು. ಆದರೆ ಸರ್ಕಾರ ನಿಬಂಧನೆಗಳನ್ನು ಹೇರಿರುವ ಹಿಂದೆ ಬೇರೆಯೇ ಉದ್ದೇಶ ಇದೆ. ಅವರ ಈ ಷಡ್ಯಂತ್ರವನ್ನು ಬಯಲು ಮಾಡುತ್ತೇವೆ. ಕೊರೊನಾ ಮೂರನೇ ಅಲೆಯ ನಿರೀಕ್ಷೆ ಇದ್ದರೂ ಸರಿಯಾದ ತಪಾಸಣೆ ನಡೆಸದೆ, ಅಂತರರಾಷ್ಟ್ರೀಯ ವಿಮಾನ ಸಂಚಾರ ತಡೆಯದೆ, ಮಾಸ್ಕ್ ಬಳಕೆ ಕಟ್ಟುನಿಟ್ಟು ಮಾಡದೆ ಈಗ ವಿರೋಧ ಪಕ್ಷವೊಂದು ತನ್ನ ಜವಾಬ್ದಾರಿ ನಿರ್ವಹಿಸಲು ಹೊರಟಾಗ ದುರುದ್ದೇಶದಿಂದ ನಿರ್ಬಂಧಗಳನ್ನು ಹೇರಿರುವುದು ಖಂಡನೀಯ.
ನಾವು ಪಾದಯಾತ್ರೆ ಘೋಷಣೆ ಮಾಡಿದ್ದು ಸರ್ಕಾರ ಕೊವಿಡ್ ನಿರ್ಬಂಧಗಳನ್ನು ಹೇರಿದ ಮೇಲಲ್ಲ. ತಿಂಗಳ ಮೊದಲೇ ದಿನಾಂಕ ನಿಗದಿ ಮಾಡಿ, ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ. ನಮ್ಮನ್ನೇ ಗುರಿಮಾಡಿ ನಿಯಮ ಹೇರಿದರೆ ನಾವು ಹೆದರಿ ಪಾದಯಾತ್ರೆ ಕೈಬಿಡೋಕಾಗುತ್ತಾ?
144 ಸೆಕ್ಷನ್ ಹೇರಿದರೆ ಐದಕ್ಕಿಂತ ಹೆಚ್ಚು ಮಂದಿ ಸೇರಬಾರದು ಎಂದಿದೆಯಲ್ವಾ? ನಾನು, ಡಿ.ಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ ಸೇರಿ ನಾಲ್ಕೇ ಮಂದಿ ನಡೆದುಕೊಂಡು ಹೋಗ್ತೇವೆ. ಆಗಲೂ ನಮ್ಮನ್ನು ತಡೆಯುತ್ತಾರಾ? ಬಲಪ್ರಯೋಗ ಮಾಡಿದರೆ ನಮ್ಮ ಸಂವಿಧಾನದತ್ತ ಹಕ್ಕುಗಳನ್ನು ಉಲ್ಲಂಘನೆ ಮಾಡಿದ ಹಾಗಾಗುವುದಿಲ್ಲವೇ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.