ಬೆಂಗಳೂರು, ಸೆ. 12: ಐಟಿ-ಬಿಟಿ, ಏರೋಸ್ಪೇಸ್ ಅಥವಾ ಇನ್ಯಾವುದೇ ಕ್ಷೇತ್ರವಿರಲಿ, ಜಾಗತಿಕ ಸವಾಲುಗಳನ್ನು ಎದುರಿಸಲು ಅಮೆರಿಕದ ಉದ್ಯಮಗಳ ಸಹಯೋಗದೊಂದಿಗೆ ಒಟ್ಟಾಗಿ ಪರಿಹಾರಗಳನ್ನು ಕಂಡುಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ರಾಜ್ಯದಲ್ಲಿ ತಂತ್ರಜ್ಞಾನ, ನಾವೀನ್ಯತೆ, ವ್ಯಾಪಾರ ಮತ್ತು ಮೂಲಸೌಕರ್ಯ ವಲಯದಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಯುಎಸ್‌ಐಬಿಸಿ ಗ್ಲೋಬಲ್ ಬೋರ್ಡ್ ಆಫ್ ಡೈರೆಕ್ಟರ್ಸ್ ಮಿಷನ್ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿ, ಕರ್ನಾಟಕ ರಾಜ್ಯ ವ್ಯಾಪಾರ- ವ್ಯವಹಾರಗಳಿಗೆ ಮುಕ್ತವಾಗಿದೆ. ಕರ್ನಾಟಕದಲ್ಲಿರುವ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಆಹ್ವಾನಿಸುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಉದ್ಯಮಶೀಲತೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಪೋಷಿಸುವ ವಾತಾವರಣವನ್ನು ಕಲ್ಪಿಸಲು ಬದ್ಧವಾಗಿದೆ. ಕರ್ನಾಟಕ ಅಪಾರ ಅವಕಾಶಗಳನ್ನು ಒದಗಿಸುವ ರಾಜ್ಯವಾಗಿದ್ದು, ನಮ್ಮ ಜನ ಹಾಗೂ ಜಾಗತಿಕ ಸಮುದಾಯದ ಭವಿಷ್ಯಕ್ಕಾಗಿ ಇವುಗಳನ್ನು ಬಳಸಿಕೊಳ್ಳಲು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.